ಬಾಗಲಕೋಟೆ: ಇಲ್ಲಿ ಪಟಾಕಿ ಸಿಡಿಸುವುದೇ ಹರಕೆ. ಜಾತ್ರೆ ಸಂದರ್ಭದಲ್ಲಿ ಭಕ್ತರು ಪಟಾಕಿ ಸಿಡಿಸುವ ಮೂಲಕ ಹರಕೆ ಈಡೇರಿಸುತ್ತಾರೆ. ಹೀಗಾಗಿ ಈ ಜಾತ್ರೆ ಪಟಾಕಿ ಜಾತ್ರೆಯೆಂದೇ ಪ್ರಸಿದ್ಧಿ. ರಬಕವಿ - ಬನಹಟ್ಟಿ ಪಟ್ಟಣದಲ್ಲಿ ಪ್ರತಿ ವರ್ಷ ಸೆಪ್ಟೆಂಬರ್ ತಿಂಗಳಿನಲ್ಲಿ ಪಟಾಕಿ ಜಾತ್ರೆ ನಡೆಯುತ್ತದೆ. ಅದರಂತೆ ಬನಹಟ್ಟಿ ನಗರದ ಆರಾಧ್ಯದೈವ ಶ್ರೀ ಕಾಡಸಿದ್ದೇಶ್ವರ ಜಾತ್ರೆ ರಥೋತ್ಸವ ಗುರುವಾರ ಅದ್ಧೂರಿಯಾಗಿ ಜರುಗಿತು. ಜಾತ್ರೆಯಲ್ಲಿ ಭಕ್ತರು ಐನೂರು ರೂಪಾಯಿಗಳಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಪಟಾಕಿ ಸಿಡಿಸಿ ಭಕ್ತಿ ಮೆರೆದರು.
ಕಾಡ ಸಿದ್ದೇಶ್ವರ ದೇವಾಲಯಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಹಿಂದಿನ ಕಾಲದಲ್ಲಿ ಪ್ರಾಣಿಗಳ ಭಯದಿಂದ ಸಿಡಿಮದ್ದುಗಳನ್ನು ಸಿಡಿಸುತ್ತಾ, ಘೋಷಣೆ ಹಾಕುತ್ತಾ ಬರುತ್ತಿದ್ದರು. ಈಗ ಅದೇ ಪದ್ಧತಿ ಮುಂದುವರೆದಿದ್ದು, ಲಕ್ಷಾಂತರ ರೂಪಾಯಿಗಳ ಪಟಾಕಿ ಸಿಡಿಸಿ ತಮ್ಮ ಹರಕೆ ತೀರಿಸುತ್ತಾರೆ.