ಬೆಂಗಳೂರು: ಲೋಕಸಭಾ ಚುನಾವಣೆಗೆ ಸಿದ್ಧತೆ ಮತ್ತು ರಾಜ್ಯಸಭಾ ಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಹೈಕಮಾಂಡ್ ನಾಯಕರ ಜೊತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಹತ್ವದ ಸಮಾಲೋಚನೆ ನಡೆಸಿದ್ದು, ವರಿಷ್ಠ ನಾಯಕರ ಭೇಟಿಯ ನಂತರ ರಾಜ್ಯಕ್ಕೆ ವಾಪಸಾಗಲಿದ್ದಾರೆ. ನವದೆಹಲಿ ಪ್ರವಾಸ ಕೈಗೊಂಡಿರುವ ಬಿ.ವೈ.ವಿಜಯೇಂದ್ರ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯದ ನೂತನ ಬಿಜೆಪಿ ಚುನಾವಣಾ ಉಸ್ತುವಾರಿ ಡಾ.ರಾಧಾ ಮೋಹನ್ ದಾಸ್ ಅಗರ್ವಾಲ್ ಅವರನ್ನು ಭೇಟಿಯಾಗಿದ್ದಾರೆ.
ಚುನಾವಣಾ ಉಸ್ತುವಾರಿಯಾದ ಹಿನ್ನೆಲೆಯಲ್ಲಿ ಅವರಿಗೆ ಶುಭ ಕೋರಿದ ವಿಜಯೇಂದ್ರ, ಚುನಾವಣಾ ಸಿದ್ಧತೆಗಳ ವಿವರ ನೀಡಿದರು. ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಗುರುವಾರ ಲೋಕಸಭಾ ಚುನಾವಣಾ ಪೂರ್ವ ಸಿದ್ಧತಾ ಕಾರ್ಯಾಗಾರ ನಡೆಸಿದ್ದು, ರಾಷ್ಟ್ರೀಯ ಸಹ ಸಂಘಟನಾ ಪ್ರಧಾನ ಕಾರ್ಯದರ್ಶಿ ಶಿವಪ್ರಕಾಶ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿಗ ಜಿ.ವಿ.ರಾಜೇಶ್, ಪಕ್ಷದ ಪದಾಧಿಕಾರಿಗಳು ಹಾಗೂ ಮುಖಂಡರು ಹಾಗೂ ಚುನಾವಣಾ ನಿರ್ವಹಣಾ ಸಮಿತಿ ಸದಸ್ಯರು ಭಾಗವಹಿಸಿದ್ದರು. ಲೋಕಸಭಾ ಚುನಾವಣೆ ನಿರ್ವಹಣೆಯನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸುವ ಕುರಿತು ಸುದೀರ್ಘವಾಗಿ ಚರ್ಚಿಸಿದ್ದು, ಇದರ ವಿವರವನ್ನು ಚುನಾವಣಾ ಉಸ್ತುವಾರಿಗಳಿಗೆ ನೀಡಿದರು.
ನಂತರ ರಾಜ್ಯದಲ್ಲಿ ಲೋಕ ಸಮರವನ್ನು ಯಶಸ್ವಿಯಾಗಿ ಎದುರಿಸಿ ಎಲ್ಲಾ 28 ಸ್ಥಾನಗಳನ್ನೂ ಗೆಲ್ಲುವ ನಿಟ್ಟಿನ ಕಾರ್ಯತಂತ್ರಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು. ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈಗ ಎನ್ಡಿಎ ಸೇರಿರುವ ಹಿನ್ನೆಲೆಯಲ್ಲಿ ಮಿತ್ರಪಕ್ಷದ ಜೊತೆಗೂಡಿ ಚುನಾವಣೆ ಎದುರಿಸಲು ಬೇಕಾದ ಕಾರ್ಯತಂತ್ರ, ಜೆಡಿಎಸ್ ಜೊತೆ ಸಮನ್ವಯತೆ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದ್ದಾರೆ. ನಂತರ ರಾಜ್ಯಕ್ಕೆ ಭೇಟಿ ನೀಡಿ ಚುನಾವಣಾ ಜವಾಬ್ದಾರಿ ನಿರ್ವಹಣೆ ಆರಂಭಕ್ಕೆ ಮನವಿ ಮಾಡಿದರು.