ಬೆಂಗಳೂರು:ರಾಜ್ಯದಲ್ಲಿ ಪರಿಸ್ಥಿತಿ ಕೆಟ್ಟ ಮಟ್ಟ ತಲುಪಿದೆ. ಆದರೆ, ರಾಜ್ಯದ ಹಣಕಾಸಿನ ಸ್ಥಿತಿ ಸುಸ್ಥಿತಿಯಲ್ಲಿದೆ. ಆಲ್ ಇಸ್ ವೆಲ್ ಅಂತ ಸಿಎಂ ಸಿದ್ದರಾಮಯ್ಯ ಅವರು ಹೇಳುತ್ತಿದ್ದಾರೆ. ಈ ರೀತಿ ಹೇಳುವುದನ್ನು ಬದಿಗಿಟ್ಟು, ರಾಜ್ಯದ ಆರ್ಥಿಕ ಪರಿಸ್ಥಿತಿಯ ಬಗ್ಗೆ ಶ್ವೇತಪತ್ರ ಹೊರಡಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಟ್ಟ ಗ್ಯಾರಂಟಿ ಜೊತೆಗೆ ಪ್ರಣಾಳಿಕೆಯ ಭರವಸೆ ಈಡೇರಿಸದ ನೀವು ಈಗ ಹೊಸದಾಗಿ ಹೊಸ ಭರವಸೆ ಕೊಡಲು ಹೊರಟಿದ್ದೀರಾ? ಈ ರಾಜ್ಯದ ಜನರನ್ನು ನೀವು ಬಿಕ್ಷುಕರು ಎಂದುಕೊಂಡಿರಾ? ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ:ಕಳೆದ ಐದಾರು ತಿಂಗಳಿಂದ ಗೃಹಲಕ್ಷ್ಮಿ ಯೋಜನೆ ಹಣ ಸಿಗುತ್ತಿಲ್ಲ. ಅಕ್ಕಿ ಬದಲು ನೀಡುತ್ತಿದ್ದ ಹಣ ಕೊಡಲು ಆಗುತ್ತಿಲ್ಲ. ಕೇಂದ್ರ ಸರ್ಕಾರ ಅಕ್ಕಿಯನ್ನು 22 ರೂ.ಗೆ ಕೊಡಲು ಸಿದ್ಧ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. ಆದರೆ ಅದನ್ನು ಖರೀದಿಸಲು ರಾಜ್ಯ ಸರ್ಕಾರ ಮುಂದೆ ಬರುತ್ತಿಲ್ಲ. ಸಾರಿಗೆ ಇಲಾಖೆಗೆ ಶಕ್ತಿ ಯೋಜನೆಯ 7 ಸಾವಿರ ಕೋಟಿ ರೂ. ಬಾಕಿಯನ್ನು ರಾಜ್ಯ ಸರ್ಕಾರ ನೀಡಬೇಕಿದೆ. ರಾಜ್ಯ ಸಾರಿಗೆ ಇಲಾಖೆ ಬಾಗಿಲು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಆರೋಪಿಸಿದರು.
ವಿದ್ಯುತ್ ಇಲಾಖೆಗೆ ವಿವಿಧ ಇಲಾಖೆಗಳಿಂದ 6 ಸಾವಿರ ಕೋಟಿ ರೂ. ಬಾಕಿ ಇದೆ ಎಂದು ಸಚಿವ ಕೆ.ಜೆ. ಜಾರ್ಜ್ ಹೇಳಿದ್ದಾರೆ. ರಾಜ್ಯ ಸರ್ಕಾರದ ಆಗ್ರಹದ ಮೇರೆಗೆ ಮೆಟ್ರೋ ದರ ಹೆಚ್ಚಾಗಿದೆ. ಸರ್ಕಾರ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಈ ತಂತ್ರ ಮಾಡುತ್ತಿದೆ. ಎಸ್ಸಿಪಿ-ಟಿಎಸ್ಪಿ ಹಣ ದುರುಪಯೋಗ ಆಗಿದೆ. ಅದು ಗ್ಯಾರಂಟಿಗೆ ಬಳಕೆ ಆಗಿದೆ. ಆ ಸಮುದಾಯದ ಮುಖಂಡರು ಸಿಎಂ ಭೇಟಿ ಮಾಡಿ ಮನವಿ ಮಾಡಿದ್ದಾರೆ ಎಂದರು.
ಲೋಕಸಭಾ ಚುನಾವಣೆ, ಉಪ ಚುನಾವಣೆ ಬಂದಾಗ ಎರಡು ದಿನಗಳ ಮೊದಲು ಗೃಹಲಕ್ಷ್ಮೀ ಹಣ ತಲುಪುತ್ತದೆ. ಈಗ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿಯೂ ಹಾಗೆಯೇ ಮಾಡುತ್ತೀರಿ. ನೀವು ರಾಜ್ಯದ ಬಡವರು, ರೈತರನ್ನು ಭಿಕ್ಷುಕರು ಎಂದು ಕೊಂಡಿದ್ದೀರಾ? ಎಂದು ಪ್ರಶ್ನಿಸಿದ ವಿಜಯೇಂದ್ರ, ಗೌರವಧನಕ್ಕಾಗಿ ಶಿಕ್ಷಕರು ಧರಣಿ ಮಾಡುತ್ತಿದ್ದಾರೆ ಎಂದು ಹೇಳಿದರು.