ಕರ್ನಾಟಕ

karnataka

ETV Bharat / state

ಮಳೆ ಬಂದರೆ ಸೋರುತ್ತದೆ ಆಜಾದ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ; ದುರಸ್ತಿ ಕಾಣದ 50 ವರ್ಷದ ಕಟ್ಟಡ - Health Center leaks

ದಾವಣಗೆರೆಯ ಆಜಾದ್​ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆ ಬಂದ್ರೆ ಸೋರುತ್ತಿದೆ. ದುರಸ್ತಿ ಕಾಣದ 50 ವರ್ಷದ ಕಟ್ಟಡದಲ್ಲೇ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ.

By ETV Bharat Karnataka Team

Published : Jul 11, 2024, 3:31 PM IST

City Primary Health Centre
ನಗರ ಪ್ರಾಥಮಿಕ ಆರೋಗ್ಯ ಕೇಂದ್ರ (ETV Bharat)

ವೈದ್ಯಾಧಿಕಾರಿ ಡಾ ಎನ್ ಎನ್ ಪುಷ್ಪವತಿ (ETV Bharat)

ದಾವಣಗೆರೆ :ಹಳೆ ದಾವಣಗೆರೆಯಲ್ಲಿ ಜನಸಂಖ್ಯೆ ಅಧಿಕವಾಗಿದೆ. ಇಲ್ಲೊಂದು ಆಸ್ಪತ್ರೆ ಕಲ್ಪಿಸಿ ಎಂಬ ಕೂಗು ಪ್ರತಿ ಚುನಾವಣೆ ವೇಳೆ ಜನರಿಂದ ಕೇಳಿ ಬರುತ್ತದೆ. ಆದರೆ, ಎಷ್ಟು ಚುನಾವಣೆಗಳು ಮುಗಿದರೂ ಆಸ್ಪತ್ರೆ ಮಾತ್ರ ಮರೀಚಿಕೆಯಾಗಿದೆ. ದುರಂತ ಎಂದರೆ ಹಳೇ ದಾವಣಗೆರೆ ಜನರ ಆರೋಗ್ಯ ಸಂಜೀವಿನಿ ಆಜಾದ್ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರ ಮಳೆ ಬಂದ್ರೆ ಸೋರುತ್ತಿದೆ. ದುರಸ್ತಿ ಕಾಣದ 50 ವರ್ಷದ ಕಟ್ಟಡದಲ್ಲೇ ರೋಗಿಗಳು, ಸಿಬ್ಬಂದಿ ಜೀವಭಯದಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ.

ಹಳೆ ದಾವಣಗೆರೆಯ ಆಜಾದ್ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ ಶಿಥಿಲಗೊಂಡಿದೆ. ಮಳೆ ಬಂತು ಎಂದರೆ ಧೋ ಎಂದು ಇಡೀ ಕಟ್ಟಡ ಸೋರುತ್ತದೆ. ದಾವಣಗೆರೆ ಸ್ಟಾರ್ಟ್ ಸಿಟಿಯಾಗಿದ್ದರೂ ಕೂಡ ಆಜಾದ್ ನಗರದಲ್ಲಿರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ದುಃಸ್ಥಿತಿಯ ಹಂತ ತಲುಪಿದೆ. ಇನ್ನು ಮಳೆ ಬಂತು ಎಂದರೆ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೊಯಿಸಿಕೊಂಡೇ ರೋಗಿಗಳು ಚಿಕಿತ್ಸೆ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ 1973ರಲ್ಲಿ ಇಲ್ಲಿ ನಿರ್ಮಾಣವಾಗಿದೆ. ಇದಲ್ಲದೇ ಅರ್ಬನ್ ಪ್ರೈಮರಿ ಹೆಲ್ತ್ ಸೆಂಟರ್ ಆಗಿ ಮೇಲ್ದರ್ಜೆಗೇರಿ ಐದು ವರ್ಷಗಳು ಕಳೆದಿವೆ. ಸಾವಿರಾರು ಜನರು ಚಿಕಿತ್ಸೆ ಅರಸಿ ಆಸ್ಪತ್ರೆಗೆ ಆಗಮಿಸುತ್ತಿದ್ದರೂ ಈ ಕಟ್ಟಡದ ದುರಸ್ತಿಗೆ ಆರೋಗ್ಯ ಇಲಾಖೆ ಮುಂದಾಗಿಲ್ಲ. ಆಸ್ಪತ್ರೆಯ ಮಾಳಿಗೆ ಸೋರುತ್ತಿದ್ದರೂ ಕೂಡ ಶಿಥಿಲಾವಸ್ಥೆಯ ಕಟ್ಟಡದಲ್ಲಿ ರೋಗಿಗಳು, ಗರ್ಭಿಣಿಯರು, ವೈದ್ಯರು ಹಾಗೂ ಸಿಬ್ಬಂದಿ ಜೀವ ಭಯದಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.

"ಮಳೆ ಬಂದರೆ ಸೋರುತ್ತಿದೆ. 50 ವರ್ಷದ ಕಟ್ಟಡ ಆಗಿದೆ. ಅದ್ರಲ್ಲೇ ನಾವು ಉತ್ತಮ ಆರೋಗ್ಯ ಸೇವೆ ಕೊಡುತ್ತಿದ್ದೇವೆ. ಜಿಪಂ ಸಿಇಒ ಅವರಿಗೆ ಪತ್ರ ಬರೆದಿದ್ದೆವು. ರಿಪೇರಿ ಮಾಡಿಸಿಕೊಡುತ್ತೇವೆ ಎಂದು ಹೇಳಿದ್ದಾರೆ. 1973 ರಲ್ಲಿ ನಿರ್ಮಾಣ ಆಗಿರುವ ಕಟ್ಟಡ ಇದು. ದಿನಕ್ಕೆ 60 ರೋಗಿಗಳು ಬರುತ್ತಿದ್ದು, ಇದರಲ್ಲೇ ಚಿಕಿತ್ಸೆ ಕೊಡುತಿದ್ದೇವೆ. 15 ಲಕ್ಷ ಅನುದಾನ ಬರಲಿದೆ ಎಂದು ಹೇಳಲಾಗುತ್ತಿದೆ" ಎಂದು ವೈದ್ಯಾಧಿಕಾರಿ ಡಾ. ಎನ್ ಎಸ್​ ಪುಷ್ಪವತಿ ತಿಳಿಸಿದ್ದಾರೆ.

ತೂತು ಬಿದ್ದ ಶೀಟ್​ಗಳು, ಉದುರುತ್ತಿದೆ ಛಾವಣಿಯ ಕಾಂಕ್ರಿಟ್‌ :ಈ ಆಜಾದ್ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡದ ಛಾವಣಿಯ ಕಾಂಕ್ರಿಟ್​ ಪುಡಿ ಪುಡಿಯಾಗಿ ಉದುರುತ್ತಿದೆ.‌ ಅಲ್ಲದೇ ಹಿಂದೆ ಮೇಲ್ ಛಾವಣಿಗೆ ಹಾಸಿರುವ ಶೀಟ್​ಗಳು ತೂತು ಬಿದ್ದಿದ್ದರಿಂದ ಮಳೆ ಬಂತು ಎಂದರೆ ಆಸ್ಪತ್ರೆ ಸೋರುತ್ತದೆ. ಇನ್ನು ರೋಗಿಗಳ ಆರೈಕೆಗಾಗಿ ಇರುವ ರೂಮಿನ ಛಾವಣಿಗೆ ಅಳವಡಿಸಿರುವ ತಗಡಿನ ಶೀಟ್‌ಗಳು ತೂತು ಬಿದ್ದಿವೆ. ಅಲ್ಲದೆ, ಗೋಡೆಗಳು ಬಿರುಕು ಬಿಟ್ಟು ಬೀಳುವ ಹಂತ ತಲುಪಿವೆ. ಕೇಂದ್ರದಲ್ಲಿ ಒಟ್ಟು 16 ಹುದ್ದೆಗಳು ಮಂಜೂರಾಗಿದ್ದು, ನಾಲ್ಕು ಖಾಯಂ ಸಿಬ್ಬಂದಿ ಇದ್ದಾರೆ. ಉಳಿದ 12 ಹುದ್ದೆಗಳಿಗೆ ಹೊರ ಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ.

"ಮಳೆ ಬಂದ್ರೆ ಇಡೀ ಕಟ್ಟಡ ಸೋರುತ್ತದೆ. ಚಿಕಿತ್ಸೆಗಾಗಿ ಬರುವವರಿಗೆ ಸಮಸ್ಯೆ ಆಗ್ತಿದೆ.‌ 40-50 ವರ್ಷದ ಕಟ್ಟಡ ಇದಾಗಿದೆ. ರೋಗಿಗಳು ತೋಯಿಸಿಕೊಂಡು ಚಿಕಿತ್ಸೆ ಪಡೆಯುವ ಪರಿಸ್ಥಿತಿ ಇದೆ. ನಮಗೆ ಹೊಸ ಕಟ್ಟಡ ಬೇಕಾಗಿದೆ ಎಂದು" ಸ್ಥಳೀಯ ರುದ್ರೇಶ್ ತಿಳಿಸಿದರು.

ಇದನ್ನೂ ಓದಿ :ಶಿವಮೊಗ್ಗದಲ್ಲಿ ಭಾರಿ ಮಳೆ : ರೈಲು ನಿಲ್ದಾಣದಲ್ಲಿ ನೀರು ಸೋರಿಕೆ.. ರಸ್ತೆಗಳು ಜಲಾವೃತ

ABOUT THE AUTHOR

...view details