ಶಿವಮೊಗ್ಗ: ದಸರಾ ಹಬ್ಬದಲ್ಲಿ ಆಯುಧ ಪೂಜೆಗೆ ವಿಶೇಷ ಮಹತ್ವವಿದೆ. ಪಾಂಡವರು ತಮ್ಮ ಅಜ್ಞಾತವಾಸ ಮುಗಿಸಿಕೊಂಡು ಬಂದು ತಮ್ಮ ಆಯುಧಗಳನ್ನಿಟ್ಟ ಶಮಿ ಮರಕ್ಕೆ ಪೂಜೆ ಸಲ್ಲಿಸಿ, ನಂತರ ಆಯುಧವನ್ನು ತೆಗೆದುಕೊಂಡು ಯುದ್ದಕ್ಕೆ ಹೋದರು ಎಂಬ ಉಲ್ಲೇಖ ಮಹಾಭಾರತದಲ್ಲಿದೆ. ಈ ಹಿನ್ನೆಲೆಯಲ್ಲಿ ನವರಾತ್ರಿಯ ಕೊನೆಯ ದಿನ ಆಯುಧ ಪೂಜೆ ನಡೆಯುತ್ತದೆ. ಇದೇ ರೀತಿ ಇಂದು ಜಿಲ್ಲೆಯಲ್ಲಿಯೂ ಆಯುಧ ಪೂಜೆ ಅದ್ಧೂರಿಯಾಗಿ ಜರುಗಿತು.
ಡಿಎಆರ್ ಪೊಲೀಸರು ತಮ್ಮ ವಾಹನಗಳನ್ನು ತೊಳೆದು ಬಾಳೆದಿಂಡು, ಮಾವು, ಬಲೂನ್ ಕಟ್ಟಿ, ಅರಿಶಿನ-ಕುಂಕುಮ, ವಿಭೂತಿ ಹಚ್ಚಿ ಸಿಂಗರಿಸಿದರು. ಬಳಿಕ ಕುಂಬಳಕಾಯಿ ಒಡೆದು ಪೂಜೆ ಸಲ್ಲಿಸಿದರು. ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ನಂತರ ಎಲ್ಲರಿಗೂ ಸಿಹಿ ವಿತರಿಸಲಾಯಿತು.
ಆಟೋಗಳಿಗೆ ಆಯುಧ ಪೂಜೆ:ಬಸ್, ಲಾರಿ, ಆಟೋಗಳನ್ನು ಹೂವುಗಳಿಂದ ಸಿಂಗರಿಸಲಾಗಿತ್ತು. ಖಾಸಗಿ ಬಸ್ ನಿಲ್ದಾಣ ಮುಂಭಾಗದ ಕಲ್ಪತರು ಆಟೋ ನಿಲ್ದಾಣದಲ್ಲಿ ಎಲ್ಲ ಆಟೋಗಳಿಗೆ ಪೂಜೆ ಸಲ್ಲಿಸಲಾಯಿತು. ಆಟೋಗಳನ್ನು ಸಾಲಾಗಿ ನಿಲ್ಲಿಸಿ ಬೂದು ಕುಂಬಳ ನಿವಾಳಿಸಿ ನೆಲಕ್ಕೆ ಒಡೆಯಲಾಯಿತು.
ಆಟೋ ಚಾಲಕ ರಾಜಣ್ಣ ಮಾತನಾಡಿ, "ನಾವು ಆಟೋ ನಂಬಿಕೊಂಡು ಜೀವನ ನಡೆಸುತ್ತಿದ್ದೇವೆ. ಇಂದು ಒಟ್ಟು ಸೇರಿ ಆಟೋಗಳನ್ನು ಸಿಂಗರಿಸಿ ಪೂಜೆ ಸಲ್ಲಿಸಿದ್ದೇವೆ. ಎಲ್ಲರಿಗೂ ಒಳ್ಳೆಯದಾಗಲಿ" ಎಂದರು.