ಬೆಂಗಳೂರು:ಮದ್ಯ ಪೂರೈಕೆಗೆ ಅನುಮತಿ ನೀಡಿ ಮತ್ತೊಂದೆಡೆ ಅದೇ ಇಲಾಖೆಯ ಅಧಿಕಾರಿಗಳು ಮಾದರಿ ಚುನಾವಣಾ ನೀತಿ ಸಂಹಿತೆ ಹೆಸರಿನಲ್ಲಿ ಎರಡು ಟ್ರಕ್ ಗಳಲ್ಲಿದ್ದ ಮದ್ಯವನ್ನು ವಶಕ್ಕೆ ತೆಗೆದುಕೊಂಡಿರುವ ಕ್ರಮಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಎರಡು ಟ್ರಕ್ ಮದ್ಯ ವಶಪಡಿಸಿಕೊಂಡು, ಎಫ್ಐಆರ್ ದಾಖಲಿಸಿದ್ದ ಕ್ರಮ ಪ್ರಶ್ನಿಸಿ ಕಲ್ಪತರು ಬ್ರಿವರೀಸ್ ಅಂಡ್ ಡಿಸ್ಟಿಲರೀಸ್ ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರಿದ್ದ ಏಕ ಸದಸ್ಯಪೀಠ ಈ ಆದೇಶವನ್ನು ನೀಡಿದೆ. ಅಲ್ಲದೇ ಈ ಸಂಬಂಧ ಮಾ.18 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಡಾಬಸ್ ಪೇಟೆಯ ಸೋಂಪುರದಲ್ಲಿನ ಕಲ್ಪತರು ಬ್ರಿವರೀಸ್ ಅಂಡ್ ಡಿಸ್ಟಿಲರೀಸ್ ಸಂಸ್ಥೆಯ ವಿರುದ್ಧ ದಾಖಲಿಸಿದ್ದ ಎರಡು ಎಫ್ಐಆರ್ ರದ್ದುಗೊಳಿಸಿ ಆದೇಶಿಸಿದೆ.
ಮಾದರಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದಾಗಲೇ ಮದ್ಯದ ಸಾಗಾಣೆಗೆ ಅಬಕಾರಿ ಇಲಾಖೆಯೇ ಪರ್ಮಿಟ್ ನೀಡಿ, ಮತ್ತೆ ಅದೇ ಇಲಾಖೆಯ ಅಕಾರಿಗಳು ಆ ನೀತಿ ಸಂಹಿತೆ ಉಲ್ಲಂಘನೆ ಕಾರಣ ನೀಡಿ ಟ್ರಕ್‌ಗಳಲ್ಲಿ ತುಂಬಿದ್ದ ಮದ್ಯ ವಶಪಡಿಸಿಕೊಂಡಿರುವುದು ಕಾನೂನಿನ ಸ್ಪಷ್ಟ ದುರ್ಬಳಕೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.
ಅಲ್ಲದೇ, ಎಂಸಿಸಿ (ಚುನಾವಣಾ ನೀತಿ ಸಂಹಿತೆ) ಜಾರಿಯಲ್ಲಿದ್ದಾಗ ಅರ್ಜಿದಾರರ ಕಂಪನಿಗೆ ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್ ಬಿಸಿಎಲ್)ಗೆ ಮದ್ಯ ಪೂರೈಸಲು ಏಕೆ ಅನುಮತಿ ನೀಡಬೇಕಿತ್ತು ಎಂದು ನ್ಯಾಯಾಲಯ ಪ್ರಶ್ನಿಸಿದೆ.