ಕರ್ನಾಟಕ

karnataka

ETV Bharat / state

ಪಾಲಿಕೆ ವ್ಯಾಪ್ತಿಯ ಕೆರೆಗಳ ನಿರ್ವಹಣೆ ಖಾಸಗಿಯವರಿಗೆ ನೀಡುವ ನಿರ್ಧಾರ: ಸಂಘ ಸಂಸ್ಥೆಗಳಿಂದ ತೀವ್ರ ವಿರೋಧ - management of the lakes - MANAGEMENT OF THE LAKES

ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಯನ್ನು ಖಾಸಗಿ ಕಾರ್ಪೋರೇಟ್​​​ ಕಂಪನಿಗಳಿಗೆ ವಹಿಸುವ ನಿರ್ಧಾರಕ್ಕೆ ಸಂಘ ಸಂಸ್ಥೆಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ. ಇದಕ್ಕೆ ಹೈಕೋರ್ಟ್ ಕರಡು ಒಪ್ಪಂದ ಪತ್ರವನ್ನು ಸಿದ್ಧಪಡಿಸಿ ಅದರ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಬೇಕು ಬಳಿಕ ವಿಚಾರಣೆ ವೇಳೆ ಅಂತಿಮ ತೀರ್ಪು ನೀಡಲಾಗುವುದು ಎಂದಿದೆ.​

HIGH COURT
HIGH COURT (ETV Bharat)

By ETV Bharat Karnataka Team

Published : Aug 20, 2024, 9:57 AM IST

ಬೆಂಗಳೂರು:ಬಿಬಿಎಂಪಿ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆಯನ್ನು ಖಾಸಗಿ ಕಾರ್ಪೋರೇಟ್​​​ ಕಂಪನಿಗಳಿಗೆ ವಹಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಟಿಜನ್​​ ಆ್ಯಕ್ಷನ್​​​​ ಗ್ರೂಪ್​​ ಸೇರಿದಂತೆ ಮತ್ತಿತರ ಸಂಘ ಸಂಸ್ಥೆಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಸಿಟಿಜನ್​ ಆ್ಯಕ್ಷನ್​ ಗ್ರೂಪ್​ ಮತ್ತಿತರರ ಸಂಸ್ಥೆಗಳು 2024ರಲ್ಲಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ. ವಿ. ಅರವಿಂದ್​​ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ, ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ವಕೀಲೆ ಜೋಯ್ನಾ ಕೊಥಾರಿಯಾ, ಪಾಲಿಕೆ ವ್ಯಾಪ್ತಿಯಲ್ಲಿನ ಕೆರೆಗಳ ನಿರ್ವಹಣೆ ಹೊಣೆ ಬಿಬಿಎಂಪಿಗೆ ಸೇರಿದ್ದು, ಆದರೆ ಅದು ಉದ್ದೇಶಿತ ನೀತಿಯಲ್ಲಿ ಖಾಸಗಿ ಕಾರ್ಪೋರೇಟ್ ಕಂಪನಿಗಳಿಗೆ ವಹಿಸಲು ಮುಂದಾಗಿದೆ. ಇದಕ್ಕೆ ತೀವ್ರ ಪ್ರತಿರೋಧವಿದೆ. ಜತೆಗೆ ಹೈಕೋರ್ಟ್ ಇದೇ ಪ್ರಕರಣದಲ್ಲಿ 2020ರ ಮಾ. 4 ರಂದು ನೀಡಿರುವ ಆದೇಶದ ಉಲ್ಲಂಘನೆಯಾಗುತ್ತದೆ ಎಂದು ವಿವರಿಸಿದರು.

ಈ ಹಿಂದೆ ಇದೇ ರೀತಿ ಪಾಲಿಕೆ ಖಾಸಗಿ ಕಾರ್ಪೋರೇಟ್​ ಕಂಪನಿಗಳ ಜತೆ ಒಪ್ಪಂದ ಮಾಡಿಕೊಂಡಾಗ ನ್ಯಾಯಾಲಯ ಆ ಒಪ್ಪಂದವನ್ನು ರದ್ದುಗೊಳಿಸಿದ್ದೇ ಅಲ್ಲದೆ, ಸರ್ಕಾರ ಬೇಕಿದ್ದರೆ ಕಾರ್ಪೋರೇಟ್ ಕಂಪನಿಗಳಿಂದ ಸಿಎಸ್‌ಆರ್ ಹಣದ ದೇಣಿಗೆ ಪಡೆದುಕೊಳ್ಳಬಹುದು. ಆದರೆ ಅವುಗಳೊಂದಿಗೆ ಒಪ್ಪಂದ ಮಾಡಿಕೊಳ್ಳಬಾರದು ಎಂದು ಸ್ಪಷ್ಟವಾಗಿ ಹೇಳಿದೆ. ಹಾಗಾಗಿ ಸರ್ಕಾರದ ನೀತಿಗೆ ತಮ್ಮ ವಿರೋಧವಿದೆ. ಜತೆಗೆ ಬಿಬಿಎಂಪಿ ಕೆರೆಗಳ ನಿರ್ವಹಣೆಗೆ ಅನುದಾನದ ಅಗತ್ಯಬಿದ್ದರೆ ಅದನ್ನು ಸರ್ಕಾರದಿಂದ ಪಡೆದುಕೊಳ್ಳಬೇಕು, ಇಲ್ಲವೇ ಬೇರೆ ಮೂಲಗಳಿಂದ ಕ್ರೋಢೀಕರಣ ಮಾಡಿಕೊಳ್ಳಬೇಕು. ಖಾಸಗಿಯವರಿಗೆ ಕರೆ ನಿರ್ವಹಣೆ ನೀಡಿದರೆ ಮುಂದಿನ ದಿನಗಳಲ್ಲಿ ಕೆರೆಗಳೇ ಖಾಸಗಿ ಕಂಪನಿಗಳ ಪಾಲಾಗುವ ಆತಂಕವಿದೆ ಎಂದು ಪೀಠಕ್ಕೆ ವಿವರಿಸಿದರು.

ಮತ್ತೊಂದು ಅರ್ಜಿದಾರರ ಪರ ವಾದ ಮಂಡಿಸಿದ ವಕೀಲ ಜಿ. ಆರ್. ಮೋಹನ್, ಕರ್ನಾಟಕ ಕೆರೆ ಸಂರಕ್ಷಣಾ ಪ್ರಾಧಿಕಾರ ಕಾಯ್ದೆಯಂತೆ ಕೆರೆಗಳನ್ನು ನಿರ್ವಹಿಸುವುದು ಬಿಬಿಎಂಪಿಯ ಆದ್ಯ ಕರ್ತವ್ಯ, ಆ ಹೊಣೆಗಾರಿಕೆಯಿಂದ ಪಾಲಿಕೆ ನುಣುಚಿಕೊಳ್ಳಲಾಗದು. ಬಿಬಿಎಂಪಿ ಕಾಯ್ದೆ ಅನ್ವಯ ಖಾಸಗಿ ಕಂಪನಿಗಳ ಜತೆ ಒಪ್ಪಂದ ಮಾಡಿಕೊಳ್ಳುವ ಯಾವುದೇ ಅಧಿಕಾರ ಬಿಬಿಎಂಪಿಗೆ ಇಲ್ಲ. ನ್ಯಾಯಾಲಯ ಯಾವುದೇ ಕಾರಣಕ್ಕೂ ಹೊಸ ನೀತಿ ಅನುಮೋದಿಸಬಾರದು. ಹಾಗೆ ಮಾಡಿದರೆ ಕೆರೆಗಳು ಸ್ಥಿತಿಗತಿ ಮತ್ತಷ್ಟು ಅಧ್ವಾನವಾಗಲಿದೆ ಎಂದು ತಿಳಿಸಿದರು.

ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ, ಬಿಬಿಎಂಪಿ ವ್ಯಾಪ್ತಿಯಲ್ಲಿಸದ್ಯ ಸುಮಾರು 205 ಕೆರೆಗಳಿದ್ದು, ಅವುಗಳ ನಿರ್ವಹಣೆಗೆ ಪ್ರತಿವರ್ಷ 60 ರಿಂದ 70 ಕೋಟಿ ಅಗತ್ಯವಿದೆ. ಆದರೆ ಅವುಗಳನ್ನು ಅಭಿವೃದ್ಧಿ, ನವೀಕರಣ ಕೈಗೊಳ್ಳಬೇಕಾದರೆ ಇನ್ನೂ ಹೆಚ್ಚಿನ ಹಣಕಾಸು ಅಗತ್ಯವಿದೆ. ಹಾಗಾಗಿ ಪಾಲಿಕೆಯೊಂದರಿಂದಲೇ ಕೆರೆಗಳ ನಿರ್ವಹಣೆ ಅಸಾಧ್ಯ, ಹಾಗಾಗಿ ಹೊಸ ನೀತಿ ರೂಪಿಸಿ ಸರ್ಕಾರೇತರ ಸಂಘ ಸಂಸ್ಥೆಗಳು, ನಾಗರಿಕ ಸೇವಾ ಸಂಘಗಳು, ಖಾಸಗಿ ಕಾರ್ಪೋರೇಟ್ ಸಂಸ್ಥೆಗಳಿಂದ ಹಣ ಪಡೆದು ಕೆರೆಗಳ ನಿರ್ವಹಣೆ ಮತ್ತು ಅಭಿವೃದ್ಧಿಗೊಳಿಸಲು ಆರ್ಥಿಕ ನೆರವು ಪಡೆದುಕೊಳ್ಳಲಾಗುವುದು ಎಂದರು.

ಅರ್ಜಿದಾರರು ಕೆರೆಗಳ ನಿರ್ವಹಣೆ ಖಾಸಗಿಯವರಿಗೆ ನೀಡುವುದರಿಂದ ಕೆರೆಗಳು ಅವರ ಪಾಲಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆ ರೀತಿ ಆಗುವುದಿಲ್ಲ, ಕೇವಲ ನಿರ್ವಹಣೆ ಮತ್ತು ಅಭಿವೃದ್ಧಿಗೆ ಮಾತ್ರ ಬಳಸಿಕೊಳ್ಳಲಾಗುವುದು, ಅವುಗಳ ಒಡೆತನ ಪಾಲಿಕೆಯಲ್ಲಿಯೇ ಇರುತ್ತದೆ. ಆ ಬಗ್ಗೆ ಆರ್ಜಿದಾರರು ಆನಗತ್ಯ ಆಕ್ಷೇಪ ಎತ್ತುತ್ತಿದ್ದಾರೆ. ಬೇಕಿದ್ದರೆ ಒಪ್ಪಂದದ ಕರಡು ಸಲ್ಲಿಸಲಾಗುವುದು, ಅದಕ್ಕೆ ಸಕಾರಾತ್ಮಕ ಸಲಹೆಗಳನ್ನು ನೀಡಿದರೆ ಅವುಗಳನ್ನು ಪರಿಗಣಿಸಲಾಗುವುದು ಎಂದು ಹೇಳಿದರು.

ವಾದ ಆಲಿಸಿದ ನ್ಯಾಯಪೀಠ, ಸರ್ಕಾರ ಒಂದು ವಾರದಲ್ಲಿ ಕೆರೆಗಳನ್ನು ಖಾಸಗಿಯವರಿಗೆ ನಿರ್ವಹಣೆಗೆ ನೀಡುವ ಸಂಬಂಧ ಕರಡು ಒಪ್ಪಂದ ಪತ್ರವನ್ನು ಸಿದ್ಧಪಡಿಸಿ ಅದರ ಪ್ರತಿಯನ್ನು ಅರ್ಜಿದಾರರಿಗೆ ಒದಗಿಸಬೇಕು. ಅದಕ್ಕೆ ಅರ್ಜಿದಾರರು ಯಾವುದಾದರೂ ಆಕ್ಷೇಪಣೆ ಇದ್ದರೆ ಸಲ್ಲಿಸಬೇಕು. ಮುಂದಿನ ವಿಚಾರಣೆ ವೇಳೆ ಅಂತಿಮ ತೀರ್ಪು ನೀಡಲಾಗುವುದು ಎಂದು ತಿಳಿಸಿ ವಿಚಾರಣೆಯನ್ನು ಸೆ.11 ಕ್ಕೆ ಮುಂದೂಡಿತು.

ಇದನ್ನೂ ಓದಿ:ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ: ಹೈಕೋರ್ಟ್​ನಲ್ಲಿ ನಡೆದ ವಾದವೇನು? - Muda Scam

ABOUT THE AUTHOR

...view details