ಹುಬ್ಬಳ್ಳಿ:ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಪುಡಿರೌಡಿಗಳ ಅಟ್ಟಹಾಸ ಮತ್ತೆ ಮುಂದಿವರೆದಿದೆ. ಕ್ಷುಲಕ ಕಾರಣಕ್ಕೆ ಸಾರ್ವಜನಿಕರ ಜೊತೆ ಜಗಳ ತೆಗೆದು ಹಲ್ಲೆ ಮಾಡುವುದು ಇತ್ತೀಚೆಗೆ ಸಾಮಾನ್ಯ ಎಂಬಂತಾಗಿದೆ. ಅಂತಹುದೇ ಒಂದು ಘಟನೆ ತಡರಾತ್ರಿ ನಡೆದಿದೆ. ನಗರದ ಮಂಟೂರು ರಸ್ತೆಯ ಗಾಂಧಿ ಏಕ್ತಾ ಕಾಲೋನಿಯಲ್ಲಿ ಯುವಕನಿಗೆ ಪುಡಿರೌಡಿಗಳ ಗುಂಪು ಕಲ್ಲಿನಿಂದ ಹೊಡೆದು ಹಲ್ಲೆ ಮಾಡಿ ಪಾರಾರಿಯಾಗಿದ್ದಾರೆ. ಘಟನೆಯಲ್ಲಿ ಗೈಬುಖಾನ್ ಅಕ್ಕಿಂ (29) ಗಾಯಾಳು. ಮಣಿಕಂಠ, ಸಾಹಿಲ್, ಮತ್ತೊಬ್ಬ ಸೇರಿಕೊಂಡು ಗಾಂಜಾ ಕುಡಿದ ಮತ್ತಿನಲ್ಲಿ ಗೈಬುಖಾನ್ ಅಕ್ಕಿಂ ಜತೆ ಸುಖಾ ಸುಮ್ಮನೆ ಏಕಾಏಕಿ ತಂಟೆ ತೆಗೆದು ಒದ್ದು, ಕೆಳಗೆ ಬೀಳಿಸಿ, ಕಲ್ಲಿನಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಹಲ್ಲೆಗೊಳಗಾದ ಗೈಬುಖಾನ್‌ನನ್ನು ಕಿಮ್ಸ್‌ಗೆ ದಾಖಲು ಮಾಡಲಾಗಿದೆ ಎಂದು ತಿಳಿದು ಬಂದಿದೆ. ಪುಂಡರ ಅಟ್ಟಹಾಸದ ದೃಶ್ಯವನ್ನು ಸ್ಥಳೀಯರೊಬ್ಬರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ಸಂಬಂಧ ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ.
ರೌಡಿಗೆ 6 ತಿಂಗಳು ಗಡಿಪಾರು :ಜಿಲ್ಲೆಯಲ್ಲಿ ಈ ರೀತಿಯ ಘಟನೆಗಳು ಹೆಚ್ಚಾಗುತ್ತಿದ್ದು ಕಳೆದ ತಿಂಗಳು ಪೊಲೀಸ್ ಕಮಿಷನರ್ ರೌಡಿಯೊಬ್ಬನನ್ನು ಜಿಲ್ಲೆಯಿಂದ ಗಡಿಪಾರು ಮಾಡಿದ್ದರು. ವಿವಿಧ ಅಪರಾಧಗಳಲ್ಲಿ ತೊಡಗಿದ್ದ ಹುಬ್ಬಳ್ಳಿ ರೌಡಿಶೀಟರ್ ಫಜಲ್ ಅಹ್ಮದ್ನನ್ನು ಫೆ.1 ರಿಂದ ಆರು ತಿಂಗಳ ಅವಧಿವರೆಗೆ ಬೀದರ್ ಜಿಲ್ಲೆಯ ನಗರ ಪೊಲೀಸ್ ಠಾಣೆ ವ್ಯಾಪ್ತಿಗೆ ಗಡಿಪಾರು ಮಾಡಿ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ್ ಆದೇಶ ಹೊರಡಿಸಿದ್ದರು.