ಬೆಂಗಳೂರು:ಕರಾವಳಿ ಭಾಗದ ಯುವ ನಾಯಕ ಅರುಣ್ ಕುಮಾರ್ ಪುತ್ತಿಲ ಮರಳಿ ಬಿಜೆಪಿ ಸೇರ್ಪಡೆಗೆ ವೇದಿಕೆ ಸಿದ್ಧವಾಗಿದ್ದು, ಪಕ್ಷದ ಸಂಘಟನಾತ್ಮಕ ನಾಯಕರು ಪುತ್ತಿಲ ಸೇರ್ಪಡೆಗೆ ಸಮ್ಮತಿಸಿದ್ದಾರೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಭೇಟಿ ನಂತರ ಪಕ್ಷ ಸೇರ್ಪಡೆ ದಿನಾಂಕ ನಿಗದಿಯಾಗಲಿದೆ.
ಮಲ್ಲೇಶ್ವರದಲ್ಲಿರುವ ಬಿಜೆಪಿ ರಾಜ್ಯ ಕಚೇರಿಯಲ್ಲಿ ಪುತ್ತಿಲ ಪಕ್ಷ ಸೇರ್ಪಡೆ ಕುರಿತು ನಾಯಕರ ಮಹತ್ವದ ಮಾತುಕತೆ ನಡೆಯಿತು. ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪುತ್ತೂರು ನಗರ ಮತ್ತು ಗ್ರಾಮಾಂತರ ಮಂಡಲ ಅಧ್ಯಕ್ಷರು ಸಭೆಯಲ್ಲಿ ಭಾಗಿಯಾಗಿದ್ದರು. ನಂತರ ಸಭೆಯಲ್ಲಿ ಅರುಣ್ ಕುಮಾರ್ ಪುತ್ತಿಲ ಕೂಡ ಭಾಗಿಯಾದರು. ಈ ವೇಳೆ ಪಕ್ಷ ಸೇರ್ಪಡೆ ಕುರಿತು ನಾಯಕರು ಸಹಮತ ವ್ಯಕ್ತಪಡಿಸಿದರು. ಯಾವುದೇ ಷರತ್ತು ಇಲ್ಲದೇ ಪುತ್ತಿಲ ಸೇರ್ಪಡೆಗೆ ಒಲವು ಹೊಂದಿರುವ ಬಿಜೆಪಿ ನಾಯಕರು ಪುತ್ತಿಲ ಬಿಜೆಪಿ ಸೇರ್ಪಡೆ ಬಗ್ಗೆ ವಿಜಯೇಂದ್ರ ಅಂತಿಮ ನಿರ್ಧಾರ ಕೈಗೊಳ್ಳುವ ನಿಲುವಿಗೆ ಬಂದಿದ್ದಾರೆ.
ಬಿ.ಎಸ್. ಯಡಿಯೂರಪ್ಪ ಭೇಟಿಯಾದ ಜಗದೀಶ್ ಶೆಟ್ಟರ್ ಇಂದು ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಲಿರುವ ಪುತ್ತಿಲ ಹಿರಿಯ ನಾಯಕ ಯಡಿಯೂರಪ್ಪ ಜೊತೆ ಚರ್ಚಿಸಿ ವಿಜಯೇಂದ್ರ ಭೇಟಿ ಮಾಡಿ ಮಾತುಕತೆ ನಡೆಸಲಿದ್ದು, ಅಲ್ಲಿಯೇ ಪಕ್ಷ ಸೇರ್ಪಡೆ ದಿನಾಂಕ ನಿಗದಿಯಾಗಲಿದೆ ಎನ್ನಲಾಗಿದೆ. ಪಕ್ಷ ಸೇರ್ಪಡೆ ನಿರ್ಧಾರವಾದರೆ ಸ್ಥಳೀಯ ಮಟ್ಟದಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿದೆ.
ಬಿಎಸ್ವೈ ಭೇಟಿಯಾದ ಶೆಟ್ಟರ್:ಮತ್ತೊಂದೆಡೆ, ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಭೇಟಿಯಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್ ರಾಜಕೀಯ ವಿಚಾರದ ಕುರಿತು ಚರ್ಚೆ ನಡೆಸಿದರು. ಡಾಲರ್ಸ್ ಕಾಲೋನಿಯ ಬಿಎಸ್ವೈ ನಿವಾಸದಲ್ಲಿ ವಿಧಾನ ಪರಿಷತ್ ಸದಸ್ಯ ಪ್ರದೀಪ್ ಶೆಟ್ಟರ್ ಮತ್ತು ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಉಪಸ್ಥಿತಿಯಲ್ಲಿ ಮಾತುಕತೆ ನಡೆಸಿ ಲೋಕಸಭಾ ಚುನಾವಣೆ ಕುರಿತು ಚರ್ಚಿಸಿದರು. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿಯಾಗಿರುವ ಜಗದೀಶ್ ಶೆಟ್ಟರ್ ಚುನಾವಣಾ ಸಿದ್ಧತೆ ಕುರಿತು ಸಮಾಲೋಚನೆ ನಡೆಸಿದರು ಎನ್ನಲಾಗಿದೆ.
ಮಾಜಿ ಸಚಿವ ಬಿ.ಸಿ. ಪಾಟೀಲ್ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಬಿ.ಸಿ. ಪಾಟೀಲ್ ಭೇಟಿಯಾದ ಬೊಮ್ಮಾಯಿ:ಹಾವೇರಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಬಿ.ಸಿ. ಪಾಟೀಲ್ ನಿವಾಸಕ್ಕೆ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಭೇಟಿ ನೀಡಿದರು. ಈ ವೇಳೆ ಬೊಮ್ಮಾಯಿ ಅವರನ್ನು ಗೌರವಿಸಿ ಸತ್ಕರಿಸಿದ ಬಿ.ಸಿ.ಪಾಟೀಲ್ ಹೊಸ ರಾಜಕೀಯ ಜೀವನಕ್ಕೆ ಶುಭ ಕೋರಿದರು. ನಂತರ ಪರಸ್ಪರ ನಾಯಕರು ಕೆಲ ಸಮಯ ರಾಜಕಾರಣ ಕುರಿತು ಚರ್ಚಿಸಿದರು. ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆಸಿ ಸಹಕರಿಸುವಂತೆ ಬೊಮ್ಮಾಯಿ ಮನವಿ ಮಾಡಿದರು. ಹಿಂದೆ ತಮ್ಮದೇ ಸಂಪುಟದಲ್ಲಿ ಸಚಿವರಾಗಿದ್ದ ಬಿ.ಸಿ. ಪಾಟೀಲ್ ಜೊತೆ ಬೊಮ್ಮಾಯಿ ಚುನಾವಣಾ ವಿಚಾರದ ಕುರಿತು ಸಮಾಲೋಚನೆ ನಡೆಸಿದ್ದು ವಿಶೇಷ. ಟಿಕೆಟ್ ಪಡೆದ ಅಭ್ಯರ್ಥಿಗಳೆಲ್ಲಾ ಆಕಾಂಕ್ಷಿಗಳಾಗಿದ್ದವರ ಭೇಟಿ ಮಾಡುತ್ತಿದ್ದು ಅದರಂತೆ ಬೊಮ್ಮಾಯಿ ಕೂಡ ಭೇಟಿ ಮಾಡುತ್ತಿದ್ದಾರೆ.
ಇದನ್ನೂ ಓದಿ:ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಆರೋಪದಲ್ಲಿ ಎಫ್ಐಆರ್ ದಾಖಲು