ಬೆಂಗಳೂರು: ಆರ್ಎಸ್ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆಯಾದ ಎಂಟು ವರ್ಷಗಳ ಬಳಿಕ ಎನ್ಐಎ ಅಧಿಕಾರಿಗಳು ಒಬ್ಬ ಆರೋಪಿಯನ್ನ ಬಂಧಿಸಿದ್ದಾರೆ. 2016 ಅಕ್ಟೋಬರ್ 16ರಂದು ಗಣವೇಷದಲ್ಲಿದ್ದ ರುದ್ರೇಶ್ನನ್ನು ಹತ್ಯೆ ಮಾಡಲಾಗಿತ್ತು. ಕೊಲೆಯಾದ 8 ವರ್ಷಗಳ ಬಳಿಕ ಮುಂಬೈನಲ್ಲಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಗೌಸ್ ನಯಾಝಿ ಎಂಬಾತನನ್ನ ಬಂಧಿಸಿರುವುದಾಗಿ ಎನ್ಐಎ ಪ್ರಕಟಣೆ ಹೊರಡಿಸಿದೆ.
ನಿಷೇಧಿತ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಕಾರ್ಯಕರ್ತನಾಗಿದ್ದ ಮೊಹಮ್ಮದ್ ಗೌಸ್ ತಲಮರೆಸಿಕೊಂಡಿದ್ದ. ಕಳೆದ ಶುಕ್ರವಾರ ತಾಂಜೇನಿಯಾದಿಂದ ಮುಂಬೈಗೆ ಬರುತ್ತಿರುವ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ಕೈಗೊಂಡು ಆರೋಪಿಯನ್ನ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆರ್ಎಸ್ಎಸ್ ಕಾರ್ಯಕರ್ತನಾಗಿದ್ದ ರುದ್ರೇಶ್ 2016 ಅಕ್ಟೋಬರ್ 16ರಂದು ಕಾಮರಾಜ್ ರಸ್ತೆಯ ಶ್ರೀನಿವಾಸ್ ಮೆಡಿಕಲ್ ಬಳಿ ನಿಂತಿರುವಾಗ ಇಬ್ಬರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದ್ದರು. ಕರ್ಮಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆಸೀಂ ಶರೀಫ್, ವಸೀಂ ಅಹಮದ್, ಇರ್ಫಾನ್ ಪಾಷಾ, ಮೊಹಮ್ಮದ್ ಮುಬೀಬುಲ್ಲಾ ಎಂಬುವರನ್ನ ಬಂಧಿಸಲಾಗಿತ್ತು. ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಯುತ್ತಿದೆ.