ಮೈಸೂರು:ಬಿಜೆಪಿ ಸಂಸದ ಶ್ರೀನಿವಾಸ್ ಪ್ರಸಾದ್ ಅವರ ಪಾರ್ಥಿವ ಶರೀರವನ್ನು ಅಶೋಕಪುರಂನ ಎನ್ಟಿಎಂ ಶಾಲೆಯ ಆವರಣದಲ್ಲಿ ಸಾರ್ವಜನಿಕರ ದರ್ಶನಕ್ಕಿಡಲಾಗಿದೆ. ಸೋಮವಾರ ಮಧ್ಯಾಹ್ನ 3 ಗಂಟೆಯಿಂದ ಮಂಗಳವಾರ ಬೆಳಗ್ಗೆ 10 ಗಂಟೆಯವರೆಗೆ ಸಾರ್ವಜನಿಕರು ಅಂತಿಮ ದರ್ಶನ ಪಡೆಯಬಹುದು. ಮಂಗಳವಾರ ಬೆಳಗ್ಗೆ 10 ಗಂಟೆಯಿಂದ 1 ಗಂಟೆಯವರೆಗೆ ಅಶೋಕಪುರಂನ ಬೀದಿಗಳಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರವನ್ನು ಡಾ.ಅಂಬೇಡ್ಕರ್ ಟ್ರಸ್ಟ್ ಆವರಣಕ್ಕೆ ಕೊಂಡೊಯ್ಯಲಾಗುತ್ತದೆ. ಮಧ್ಯಾಹ್ನ ಬೌದ್ಧಧರ್ಮದ ವಿಧಿವಿಧಾನದಂತೆ ಅಂತ್ಯಕ್ರಿಯೆ ನೆರವೇರಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಮಲ್ಲಿಕಾರ್ಜುನ್ ಖರ್ಗೆ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಅನೇಕ ಗಣ್ಯರು ಅಂತ್ಯಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ.
"ನನ್ನನ್ನು ರಾಜಕೀಯವಾಗಿ ಬೆಳೆಸಿದ ನಾಯಕ ಶ್ರೀನಿವಾಸ್ ಪ್ರಸಾದ್. ಅವರು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ನನ್ನ ಗೆಲುವಿಗೆ ಕಾರಣರಾಗಿದ್ದರು. ಅವರು ಕಾಂಗ್ರೆಸ್ ತೊರೆದಾಗ ನಾನು ಕಣ್ಣೀರು ಹಾಕಿದ್ದೆ. ಮಣಿಪಾಲ್ ಆಸ್ಪತ್ರೆಯಲ್ಲಿದ್ದಾರೆ ಎಂದು ತಿಳಿದು ನೋಡಲು ಹೋಗಬೇಕಿತ್ತು. ಅಷ್ಟರಲ್ಲೇ ಇಂದು ಬೆಳಗ್ಗೆ ನಿಧನದ ಸುದ್ದಿ ತಿಳಿದು ದುಃಖವಾಯಿತು" ಎಂದು ಶಾಸಕ ಪುಟ್ಟರಂಗ ಶೆಟ್ಟಿ ಕಂಬನಿ ಮಿಡಿದಿದ್ದಾರೆ.
ಶಾಸಕ ಜಿ.ಟಿ.ದೇವೇಗೌಡ, ಸುತ್ತೂರು ಶ್ರೀ ಹಾಗೂ ಎಂಎಲ್ಸಿ ಹೆಚ್.ವಿಶ್ವನಾಥ್ ಅವರು ಶ್ರೀನಿವಾಸ್ ಪ್ರಸಾದ್ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.