ದೂಡಾ ಸಭೆಯಲ್ಲಿ ಬಿಜೆಪಿ ಶಾಸಕ, ಜಿಲ್ಲಾ ಉಸ್ತುವಾರಿ ಸಚಿವರ ಜಟಾಪಟಿ ದಾವಣಗೆರೆ:ದಾವಣಗೆರೆನಗರಾಭಿವೃದ್ಧಿ ಪ್ರಾಧಿಕಾರದ (ದೂಡಾ) ಸಾಮಾನ್ಯ ಸಭೆಯಲ್ಲಿ ಮಂಗಳವಾರ ಹರಿಹರ ಶಾಸಕ ಬಿ.ಪಿ.ಹರೀಶ್ ಹಾಗು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ನಡುವೆ ಮಾತಿನ ಚಕಮಕಿ ನಡೆದಿದೆ. ನಿಯಾಮವಳಿಗಳನ್ನು ಗಾಳಿಗೆ ತೂರಿ ಕೆಲವೊಂದು ಲೇಔಟ್‌ಗೆ ಅಪ್ರೂವಲ್ ಪಡೆಯಲಾಗಿದೆ ಎಂದು ಬಿ.ಪಿ.ಹರೀಶ್ ಆಕ್ರೋಶ ವ್ಯಕ್ತಪಡಿಸಿದರು. ಈ ವಿಚಾರ ಚರ್ಚೆಯಾಗಬೇಕಿತ್ತು. ಆದರೆ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಏಕಪಕ್ಷೀಯ ತೀರ್ಮಾನ ತೆಗೆದುಕೊಳ್ಳಲಾಗುತ್ತಿದೆ ಆರೋಪಿಸಿ ವಾಗ್ವಾದಕ್ಕಿಳಿದರು.
ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಎಂ.ವಿ ಹಾಗು ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ಹರೀಶ್ ಹರಿಹಾಯ್ದರು. ದಾವಣಗೆರೆ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಾನೂ ಒಬ್ಬ ಸದಸ್ಯ ಎಂದು ಸಭೆಯಲ್ಲಿ ಏರು ಧ್ವನಿಯಲ್ಲಿ ಟೇಬಲ್ ಕುಟ್ಟಿ ಆಕ್ರೋಶ ಹೊರಹಾಕಿದರು. ಈ ವೇಳೆ, "ನಿಂದು ಏನಾದರೂ ನಿರಾಕರಣೆ ಇದ್ದರೆ ಬರೆದುಕೊಡು" ಎಂದು ಸಚಿವ ಮಲ್ಲಿಕಾರ್ಜುನ್ ಹೇಳಿದರು. ಇದಕ್ಕೆ ಬಿ.ಪಿ.ಹರೀಶ್, ಗಮನಕ್ಕೆ ತಾರದೇ ಕೆಲವೊಂದು ಲೇಔಟ್ ಪ್ಲಾನ್ ಒಪ್ಪಿಗೆ ಮಾಡಿದ್ದಾರೆ ಎಂದರು. ಬಳಿಕ ನನಗೆ ಬೇರೆ ಕೆಲಸ ಇದೆ ಎಂದು ಹೇಳಿದ ಸಚಿವರಿಗೆ ಅದೇ ಧಾಟಿಯಲ್ಲಿ ಶಾಸಕರು ಉತ್ತರಿಸಿದ ಪ್ರಸಂಗ ಕಂಡುಬಂತು.
5 ವರ್ಷ ಲೂಟಿ ಹೊಡೆದಿದ್ದೀರಿ- ಸಚಿವ ಎಸ್.ಎಸ್.ಮಲ್ಲಿಕಾರ್ಜುನ್:ಸಭೆಯಲ್ಲಿ ವಾಗ್ವಾದ ಹೆಚ್ಚಾಗುತ್ತಿದ್ದಂತೆ ಸಿಟ್ಟಿಗೆದ್ದ ಸಚಿವ ಮಲ್ಲಿಕಾರ್ಜುನ್, "5 ವರ್ಷ ನೀವು ಲೂಟಿ ಹೊಡೆದಿದ್ದೀರಿ" ಎಂದು ಶಾಸಕ ಬಿ.ಪಿ.ಹರೀಶ್ ವಿರುದ್ಧ ಟೀಕಾಸಮರ ನಡೆಸಿದರು. ಈ ಸಂದರ್ಭದಲ್ಲಿ ಸಚಿವರು ಮತ್ತು ಶಾಸಕರು ಪರಸ್ಪರ ಏಕವಚನದಲ್ಲಿ ಸಂಬೋಧಿಸಿದರು. ಇಷ್ಟಕ್ಕೆ ಸುಮ್ಮನಾಗದ ಬಿ.ಪಿ.ಹರೀಶ್ ಭ್ರಷ್ಟಾಚಾರದಲ್ಲಿ ದೂಡಾ ಅಧ್ಯಕ್ಷರಾದ ಡಿಸಿ ಪಾಲುದಾರರಾಗಿದ್ದಾರೆ ಎಂದು ಆರೋಪಿಸಿದರು.
ಜಿಲ್ಲಾಧಿಕಾರಿ ಸಚಿವರ ಸೇವಕನಂತೆ ವರ್ತಿಸುತ್ತಿದ್ದಾರೆ- ಶಾಸಕ ಬಿ.ಪಿ.ಹರೀಶ್: ದಾವಣಗೆರೆ ಜಿಲ್ಲಾಧಿಕಾರಿ ಡಾ.ವೆಂಕಟೇಶ್ ಸಚಿವರ ಏಜೆಂಟರಂತೆ ವರ್ತಿಸುತ್ತಿದ್ದಾರೆಂದು ದೂರಿದರು. ಸಾವುಕಾರನ ಮನೆಯ ಸೇವಕನಂತೆ ಐಎಎಸ್ ಅಧಿಕಾರಿ ವರ್ತಿಸುತ್ತಿದ್ದಾರೆ. ಸಚಿವರು ಹೇಳಿದಂತೆ ಐಎಎಸ್ ಅಧಿಕಾರಿ ತಲೆ ಆಡಿಸುತ್ತಾನೆ. ಈ ಭ್ರಷ್ಟ ವ್ಯವಸ್ಥೆ, ಅಧಿಕಾರಿಗಳು, ಸಚಿವರ ವಿರುದ್ಧ ಹೋರಾಟ ಮಾಡುತ್ತೇವೆ ಎಂದರು.
ಬಳಿಕ ಶಾಸಕ ಬಿ.ಪಿ.ಹರೀಶ್ ಪ್ರತಿಕ್ರಿಯಿಸಿ, "ದೂಡದಲ್ಲಿ ಅವ್ಯವಹಾರ ನಡೆಯುತ್ತಿದೆ. ಭ್ರಷ್ಟಾಚಾರದ ಗೂಡು ಈ ಪ್ರಾಧಿಕಾರ. ಇಲ್ಲಿ ನಡೆಯುವ ಪ್ರತಿಯೊಂದು ಆಗುಹೋಗುಗಳನ್ನೂ ಸಭೆಯ ಗಮನಕ್ಕೆ ತರಬೇಕು ಎಂದು ಪ್ರಾಧಿಕಾರದ ಅಧ್ಯಕ್ಷರಾದ ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದಿದ್ದೆ. ನಾನು ಕೊಟ್ಟ ಪತ್ರವನ್ನು ಇಂದು ನಡೆದ ಸಭೆಯಲ್ಲಿ ಗಮನಕ್ಕೆ ತರದೇ ಜಿಲ್ಲಾಧಿಕಾರಿ ಭ್ರಷ್ಟಾಚಾರದಲ್ಲಿ ಮುಳುಗಿ ಜನರ ರಕ್ತ ಕುಡಿಯುತ್ತಿದ್ದಾರೆ. ಜಿಲ್ಲಾಧಿಕಾರಿ, ನಿಮಗೆ ಹರಿಹರದ್ದು ಮಾತ್ರ ಗಮನಕ್ಕೆ ತರುತ್ತೇವೆ. ಅದನ್ನು ಮಾತ್ರ ನೀವು ನೋಡಿಕೊಳ್ಳಿ ಎಂದು ಹೇಳುತ್ತಿದ್ದಾರೆ. ಸಚಿವರಿಗೆ ಸಂಬಂಧವೇ ಇಲ್ಲ. ಅವರು ಮನೆಯ ವ್ಯವಹಾರದಂತೆ ನಡೆದುಕೊಂಡರು" ಎಂದು ಸಚಿವ ಮಲ್ಲಿಕಾರ್ಜುನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
"ಲೇಔಟ್ಗಳಾದರೆ ಶಾಸಕರಿಗೆ ತಿಳಿಸಬೇಕಂತೆ. ಶಾಸಕರಾದರೆ ಪ್ರತಿಯೊಂದು ಲೇಔಟ್ಗಳನ್ನು ನೋಡಬೇಕಾ?. ಹಿಂದಿನ ಸರ್ಕಾರದಲ್ಲಿ ಮಾಡಿಕೊಂಡಂತೆ ಕೆಲವು ಲೇಔಟ್ಗಳನ್ನು ಮಾಡಿಕೊಂಡಿದ್ದಾರೆ. ಆದರೆ ಈ ಪುಣ್ಯಾತ್ಮ ಅದನ್ನೇ ಕೇಳುತ್ತಿದ್ದಾರೆ. ಯಾರೋ ಕಾನೂನು ಪ್ರಕಾರ ಲೇಔಟ್ ಮಾಡುತ್ತಿದ್ದಾರೆ ಎಂದರೆ ನನಗೇಕೆ ಗಮನಕ್ಕೆ ತರಬೇಕು?. ಈ ಶಾಸಕರ ಗಮನಕ್ಕೆ ತರಬೇಕಂತೆ" ಸಚಿಲ ಎಸ್.ಎಸ್.ಮಲ್ಲಿಕಾರ್ಜುನ್ ಹೇಳಿದರು.
ಇದನ್ನೂ ಓದಿ:ಶಾಸಕ ಹೆಬ್ಬಾರ್ ಕಾಂಗ್ರೆಸ್ಗೆ ಬಂದರೆ ಸ್ವಾಗತ: ಸಿಎಂ ಸಿದ್ಧರಾಮಯ್ಯ