ಬೆಂಗಳೂರು:ವಿಶೇಷ ಚೇತನರು, ಹಿರಿಯ ನಾಗರಿಕರಿಗೆ ಮನೆಯಲ್ಲಿಯೇ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಮೊದಲ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳಲ್ಲಿ ಶನಿವಾರದಿಂದ (ಏ.13)ಗೌಪ್ಯ ಮತದಾನ ಆರಂಭವಾಗಿದ್ದು, ಏ.18 ರವರೆಗೆ ನಡೆಯಲಿದೆ.
ಬೆಂಗಳೂರು ಉತ್ತರ, ಕೇಂದ್ರ, ದಕ್ಷಿಣ ಹಾಗೂ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ನೇತೃತ್ವದಲ್ಲಿ ಶನಿವಾರ 4459 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ ವಿಶೇಷ ಚೇತನರು ಮತ ಚಲಾಯಿಸಿದ್ದಾರೆ.
ಬೆಂಗಳೂರು ವ್ಯಾಪ್ತಿಯಲ್ಲಿ ಬರುವ ನಾಲ್ಕು ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 7556 ಮಂದಿ 85 ವರ್ಷ ಮೇಲ್ಪಟ್ಟವರು ಹಾಗೂ 302 ಮಂದಿ ವಿಶೇಷಚೇತನರು ಮನೆಯಿಂದ ಮತದಾನ ಮಾಡಲು ನೋಂದಣಿ ಮಾಡಿಕೊಂಡಿದ್ದು, ಈ ಪೈಕಿ 4459 ಮಂದಿ ಮತ ಚಲಾಯಿಸಿದ್ದಾರೆ. ಅದರಲ್ಲಿ ಬೆಂಗಳೂರು ವ್ಯಾಪ್ತಿಯ ಮೂರು (ಉತ್ತರ, ಕೇಂದ್ರ ಮತ್ತು ದಕ್ಷಿಣ) ಲೋಕಸಭಾ ಕ್ಷೇತ್ರಗಳಲ್ಲಿ 85 ವರ್ಷ ಮೇಲ್ಪಟ್ಟ 6206 ಮತದಾರರು ಹಾಗೂ ವಿಶೇಷಚೇತನ 201 ಮತದಾರರು ಅಂಚೆ ಮತದಾನಕ್ಕೆ ನೊಂದಣಿ ಮಾಡಿಕೊಂಡಿದ್ದರು.
ಮತದಾರರ ಮನೆಗೆ ಇಬ್ಬರು ಮತಗಟ್ಟೆ ಅಧಿಕಾರಿಗಳು, ಭದ್ರತಾ ಸಿಬ್ಬಂದಿ, ವಿಡಿಯೋಗ್ರಾಫರ್ ಒಳಗೊಂಡಿರುವ ಮತಗಟ್ಟೆ ತಂಡವು ತೆರಳಿ ಮತದಾನ ಗುರುತಿನ ಚೀಟಿ ಪರಿಶೀಲಿಸುತ್ತದೆ. ಬಳಿಕ ಗೌಪ್ಯ ಮತದಾನಕ್ಕಾಗಿ ಅಂಚೆ ಮತಪತ್ರದಲ್ಲಿ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ವಿಡಿಯೋಗ್ರಫಿ ಮೂಲಕ ಸೆರೆ ಹಿಡಿಯಲಾಗುತ್ತದೆ ಎಂದು ಚುನಾವಣಾ ಅಧಿಕಾರಿಗಳು ಹೇಳಿದ್ದಾರೆ.
ಮತಗಟ್ಟೆ ಸಿಬ್ಬಂದಿಯು ಮತಪತ್ರ ಹಾಗೂ ಮತ ಪೆಟ್ಟಿಗೆಗಳೊಂದಿಗೆ ಪ್ರತಿ ಮತದಾರರ ಮನೆಗೆ ಎರಡು ಬಾರಿ ಭೇಟಿ ನೀಡುತ್ತಾರೆ. ಮುಂಚಿತವಾಗಿ ಮಾಹಿತಿ ನೀಡಿದ ಬಳಿಕವೇ ಮತಗಟ್ಟೆ ಸಿಬ್ಬಂದಿ ಭೇಟಿ ನೀಡುವರು. ಮೊದಲ ಬಾರಿ ಮತದಾರರು ಮನೆಯಲ್ಲಿರದಿದ್ದರೆ, ಎರಡನೇ ಬಾರಿ ಹೋಗುತ್ತಾರೆ. ಆ ಬಳಿಕ ಮತದಾನಕ್ಕೆ ಅವಕಾಶವಿರುವುದಿಲ್ಲ. ಮನೆಯಿಂದ ಮತದಾನಕ್ಕೆ 12ಡಿ ನಮೂನೆಯಲ್ಲಿ ನೋಂದಣಿ ಮಾಡಿಸಿಕೊಂಡಿರುವವರಿಗೆ ಮತಗಟ್ಟೆಗೆ ಬಂದು ವಿದ್ಯುನ್ಮಾನ ಮತಯಂತ್ರದಲ್ಲಿ ಮತ ಚಲಾಯಿಸುವ ಅವಕಾಶವಿರುವುದಿಲ್ಲ ಎಂದು ಅಧಿಕಾರಿಗಳು ಮಾಹಿತಿ ಹಂಚಿಕೊಂಡಿದ್ದಾರೆ.