ಬೆಂಗಳೂರು:ವರುಣನ ಆರ್ಭಟಕ್ಕೆ ರಾಜ್ಯದ ಜನತೆಯ ಗೋಳು ಒಂದು ಕಡೆಯಾದರೆ, ರಾಜಧಾನಿಯ ಜನರು ಸಹ ತತ್ತರಿಸಿದ್ದಾರೆ. ಮಳೆಯಿಂದ ಸಿಲಿಕಾನ್ ಸಿಟಿಯ ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಮಂಗಳವಾರ ಸಂಜೆಯಿಂದಲೇ ಮಳೆ ಆರಂಭವಾಗಿದ್ದು, ತಡರಾತ್ರಿವರೆಗೆ ಒಂದೇ ಸಮನೆ ಸುರಿಯುತ್ತಿತ್ತು. ರಾತ್ರಿ ಹತ್ತು ಗಂಟೆ ವೇಳೆಗೆ ನಗರದ ಅನೇಕ ಏರಿಯಾಗಳಲ್ಲಿ ಮಳೆ ನೀರು ಮನೆಗೆ ನುಗ್ಗಿ, ಮನೆಯಲ್ಲಿದ್ದ ದಿನಸಿ, ಟಿವಿ, ಫ್ರಿಡ್ಜ್, ಸೋಫಾ, ಬಟ್ಟೆ ಬರೆ ನೀರಿನಲ್ಲಿ ಮುಳುಗಿ ಹಾನಿಯಾಗಿವೆ. ಇತ್ತ ವಾಹನ ಸವಾರರು ಕಳೆದ ಒಂದು ವಾರದಿಂದ ರಸ್ತೆಯಲ್ಲಿಯೇ ಅರ್ಧ ರಾತ್ರಿ ಕಳೆಯುವಂತಾಗಿದೆ. ಇನ್ನು ನಗರದ ಹಲವು ಭಾಗಗಳಲ್ಲಿ ಮಳೆಯಿಂದ ಬೃಹತ್ ಗಾತ್ರದ ಮರಗಳು ಹಾಗೂ ಮರದ ಟೊಂಗೆಗಳು ಧರೆಗುರುಳಿವೆ. ಇದರಿಂದ ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗಿ ಬಿಬಿಎಂಪಿಗೆ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ.
ಮಳೆಯಿಂದ ಬೆಂಗಳೂರಲ್ಲಿ ಅವಾಂತರ ಸೃಷ್ಟಿ (ETV Bharat) ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿರುವ ಕೇಂದ್ರಿಯ ವಿಹಾರ ಅಪಾರ್ಟ್ಮೆಂಟ್ ಹಾಗೂ ಕ್ಯಾಲಿಫೋರ್ನಿಯ ಲೇಔಟ್ ಮಳೆರಾಯನ ಆರ್ಭಟಕ್ಕೆ ಜಲಾವೃತವಾಗಿವೆ. ಇದು ಸ್ಥಳೀಯ ಶಾಸಕರು ಹಾಗೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ.
ಜಲಾವೃತಗೊಂಡಿರುವ ರಸ್ತೆ (ETV Bharat) ಈ ಎರಡೂ ಕಡೆ ಪ್ರತಿ ಬಾರಿ ಮಳೆ ಬಂದಾಗಲೂ ಇದೇ ರೀತಿ ನೀರು ನುಗ್ಗಿ ಲೇಔಟ್ ಜಲವೃತವಾಗುತ್ತಿದೆ. ನಿನ್ನೆ ಸುರಿದ ಮಳೆಗೆ ನಿವಾಸಿಗಳು ಪರದಾಡುವಂತಾಯಿತು. ಸದ್ಯ ಮನೆಯಿಂದ ಹೊರಬರಲು ಆಗದೇ ತಾವೇ ಟ್ರ್ಯಾಕ್ಟರ್ ಕರೆಸಿಕೊಂಡು ಜನ ಲೇಔಟ್ನಿಂದ ಹೊರಗೆ ಬರುತ್ತಿದ್ದಾರೆ. ಅಷ್ಟೇ ಅಲ್ಲದೆ ರಸ್ತೆಯಲ್ಲಿ ನಿಂತಿರುವ ನೀರನ್ನು ಹೊರ ಹಾಕುವ ಪ್ರಯತ್ನ ಮಾಡಲಾಗುತ್ತಿದೆ.
ಲೇಔಟ್ನ ನಿವಾಸಿಗಳು ರಾತ್ರಿಯಿಡಿ ನಿದ್ದೆಗೆಟ್ಟು, ಊಟ ಇಲ್ಲದೆ, ನಡುರಸ್ತೆಲ್ಲಿಯೇ ಕಾಲ ಕಳೆದಿದ್ದಾರೆ. ಇನ್ನು, ಬಿಬಿಎಂಪಿ ಅಧಿಕಾರಿಗಳು ಇಂದು ಭೇಟಿ ನೀಡಿ ರಾಜಕಾಲುವೆ ಹಾಗೂ ರಸ್ತೆಯನ್ನೂ ಸರಿ ಮಾಡಿಸುತ್ತೇವೆ ಎಂದು ಭರವಸೆಯನ್ನು ನೀಡಿದ್ದಾರೆ.
ಜಲಾವೃತಗೊಂಡಿರುವ ರಸ್ತೆ (ETV Bharat) ಸಾಯಿ ಲೇಔಟ್ ಜಲಾವೃತ: ಸಾಯಿ ಲೇಔಟ್ನ ಜನರ ಗೋಳನ್ನು ಕೇಳುವವರಿಲ್ಲದಂತಾಗಿದೆ. ಕಳೆದ ಒಂದು ವರ್ಷದಿಂದಲಂತೂ ಲೇಔಟ್ ಜನರ ಮಳೆ ಬಂದರೆ ಸಾಕು, ನರಕಯಾತನೆ ಅನುಭವಿಸುತ್ತಿದ್ದಾರೆ. ಒಂದು ಸಣ್ಣ ಮಳೆಯಿಂದ ರಾತ್ರಿಯಿಡೀ ಜಾಗರಣೆ ಮಾಡಬೇಕಾಗುತ್ತದೆ. ಅದೇ ರೀತಿ ನಗರದಲ್ಲಿ ಕಳೆದ ಮೂರು ದಿನಗಳಿಂದ ಬಿಟ್ಟು ಬಿಡದೆ ಮಳೆ ಸುರಿಯುತ್ತಿದ್ದು, ಭಾರಿ ಪ್ರಮಾಣದ ನೀರು ಲೇಔಟ್ಗೆ ನುಗ್ಗುತ್ತಿದೆ. ಇದರಿಂದ ಲೇಔಟ್ ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಕಳೆದ ರಾತ್ರಿ ಸಹ ಜೋರು ಮಳೆಯಾಗಿದ್ದು, ತಗ್ಗು ಪ್ರದೇಶದಲ್ಲಿರುವ ಲೇಔಟ್ ಸಂಪೂರ್ಣ ಜಲಮಯವಾಗಿದೆ.
ಮಳೆ ನೀರು ಮೂರ್ನಾಲ್ಕು ಅಡಿಯಷ್ಟು ನಿಂತಿದ್ದು, ಮನೆಯಿಂದ ಹೊರಬಾರದಂತ ಪರಿಸ್ಥಿತಿ ನಿರ್ಮಾಣವಾಗಿದೆ. ಹಾಲು, ತರಕಾರಿ ತರಲು ಸಹ ಸಾಧ್ಯವಾಗದೆ ಮತ್ತು ಕೆಲಸಕ್ಕೆ ಹೋಗಲು ಪರದಾಡುವಂತಾಗಿದೆ ಎಂದು ಇಲ್ಲಿನ ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.
ಮತ್ತೊಂದೆಡೆ, ಮಾನ್ಯತಾ ಟೆಕ್ ಪಾರ್ಕ್ ಕಳೆದ ಮೂರು ದಿನಗಳಿಂದ ಜಲದಿಗ್ಬಂಧನ ಎದುರಿಸುತ್ತಿದೆ. ರಸ್ತೆಯಲ್ಲಿ ನೀರು ತುಂಬಿದ್ದು, ನದಿಯಂತೆ ಭಾಸವಾಗುತ್ತಿದೆ.
ವಿಶ್ವದ ಹಲವು ದೈತ್ಯ ಐಟಿ ಕಂಪನಿಗಳು ತಮ್ಮ ಕಾರ್ಯನಿರ್ವಹಣೆ ನೆಡೆಸುತ್ತಿರುವ ಮಾನ್ಯತಾ ಟೆಕ್ ಪಾರ್ಕ್ ಅನ್ನು ಮಾನ್ಯತಾ ಟೆಕ್ ಫಾಲ್ಸ್ ಎಂದು ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಮಾನ್ಯತಾ ಟೆಕ್‌ಪಾರ್ಕ್ ಬಳಿ ರಸ್ತೆ ಬದಿಯೇ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿದ್ದು, 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ಇದರಿಂದ ರಸ್ತೆ ಪಕ್ಕದಲ್ಲೇ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆ ಕಾಂಪೌಂಡ್ ಕೂಡ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ.
ಹಲವು ಮನೆಗಳಿಗೆ ನೀರು, ಉರುಳಿ ಬಿದ್ದ ಮರಗಳು: ನಗರದ ಪ್ರಮುಖ ರಸ್ತೆಗಳಲ್ಲಿ ಮಳೆಯ ಅಬ್ಬರಕ್ಕೆ ಭಾರೀ ಟ್ರಾಫಿಕ್ ಜಾಮ್ ಕೂಡ ಉಂಟಾಗುತ್ತಿದೆ. ಎಲೆಕ್ಟ್ರಾನಿಕ್ ಸಿಟಿ, ಹಳೆ ಮದ್ರಾಸ್ ರಸ್ತೆ, ತುಮಕೂರು ರಸ್ತೆ, ಮೈಸೂರು ರಸ್ತೆ ಸೇರಿ ಮೆಜೆಸ್ಟಿಕ್ ಭಾಗದಲ್ಲೂ ಭಾರೀ ಟ್ರಾಫಿಕ್ ಆಗುತ್ತಿದೆ. ಇನ್ನು ಸಿಲಿಕಾನ್ ಸಿಟಿಯಲ್ಲಿ ಕಳೆದ ಮೂರು ದಿನಗಳಲ್ಲಿ 142 ಮನೆಗಳಿಗೆ ನೀರು ನುಗ್ಗಿದೆ. 39 ಮರಗಳು ಧರೆಗುರುಳಿದ್ದು, 26 ಮರಗಳನ್ನು ತೆರವುಗೊಳಿಸಲಾಗಿದೆ. 55 ಕಡೆ ಮರದ ಕೊಂಬೆಗಳು ಮುರಿದು ಬಿದ್ದಿವೆ.
ಕೆಲ ರೈಲುಗಳು ರದ್ದು:ಭಾರೀ ಮಳೆಯಿಂದಾಗಿ ರೈಲ್ವೆ ಹಳಿಗಳ ಮೇಲೆ ನೀರು ನಿಂತಿರುವ ಕಾರಣ ನೈಋತ್ಯ ರೈಲ್ವೆ ಬುಧವಾರ ಕೆಲ ರೈಲುಗಳನ್ನು ರದ್ದುಗೊಳಿಸಿದೆ. ಬೇಸಿನ್ ಬ್ರಿಡ್ಜ್ ಜಂಕ್ಷನ್ (ಚೆನ್ನೈ) ಮತ್ತು ವೇಸರ್ಪಾಡಿ ನಿಲ್ದಾಣಗಳ ನಡುವಿನ ಸೇತುವೆ ಸಂಖ್ಯೆ 114 ರ ಮೇಲಿನ ಮಾರ್ಗದಲ್ಲಿ ನೀರು ನಿಂತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ರೈಲು ಸಂಖ್ಯೆ 20623 ಮೈಸೂರು-ಕೆಎಸ್‌ಆರ್ ಬೆಂಗಳೂರು ಮಾಲ್ಗುಡಿ ಎಕ್ಸ್‌ಪ್ರೆಸ್, ರೈಲು ಸಂಖ್ಯೆ 20624 ಕೆಎಸ್‌ಆರ್ ಬೆಂಗಳೂರು-ಮೈಸೂರು ಮಾಲ್ಗುಡಿ ಎಕ್ಸ್‌ಪ್ರೆಸ್ ಮತ್ತು ರೈಲು ಸಂಖ್ಯೆ 16022 ಮೈಸೂರು-ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ಕಾವೇರಿ ಎಕ್ಸ್‌ಪ್ರೆಸ್ ರೈಲು ಸೇವೆಗಳನ್ನು ರದ್ದು ಮಾಡಲಾಗಿದೆ.
ಇದನ್ನೂ ಓದಿ:ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್