ಚಿಕ್ಕಮಗಳೂರು: ಜಿಲ್ಲೆಯಲ್ಲಿ 55 ವರ್ಷದ ಮಹಿಳೆಗೆ ಮಂಗನ ಕಾಯಿಲೆ ಸೋಂಕು ದೃಢಪಟ್ಟಿದೆ. ಆ ಮೂಲಕ ಜಿಲ್ಲೆಯಲ್ಲಿ ಪ್ರಕರಣಗಳ ಸಂಖ್ಯೆ 9ಕ್ಕೆ ಏರಿಕೆಯಾಗಿದೆ. ಪ್ರಮುಖವಾಗಿ, ಮಲೆನಾಡು ಭಾಗದಲ್ಲಿ ಈ ಸೋಂಕು ಹೆಚ್ಚಳವಾಗುತ್ತಿದೆ. ಈಗಾಗಲೇ ನಾಲ್ವರು ಗುಣಮುಖರಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ.
ಶೃಂಗೇರಿ ತಾಲೂಕಿನ ಬೇಗಾನೆಯ ವೃದ್ದರೊಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. ಸದ್ಯ ನಾಲ್ಕು ಸಕ್ರಿಯ ಪ್ರಕರಣಗಳಿಗೆ ಕೊಪ್ಪ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಅತಿ ಹೆಚ್ಚು ಪ್ರಕರಣಗಳು ಕೊಪ್ಪ ತಾಲೂಕಿನ ಒಎಲ್‌ವಿ ಎಸ್ಟೇಟ್ ಭಾಗದಲ್ಲಿ ಪತ್ತೆಯಾಗಿದೆ. ಹೀಗಾಗಿ ಆರೋಗ್ಯ ಇಲಾಖೆ ತಾಲೂಕಿನಲ್ಲಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದು, ಕೊಪ್ಪ ಸರ್ಕಾರಿ ಆಸ್ಪತ್ರೆಯಲ್ಲಿ ಕೆಎಫ್ಡಿ ವಾರ್ಡ್ ತೆರೆದಿದೆ. ಅರಣ್ಯದಲ್ಲಿ ಕೆಎಫ್ಡಿ ಸೋಂಕು ಹರಡದಂತೆ ಔಷಧಿ ಸಿಂಪಡಣೆ ಮಾಡಲಾಗುತ್ತಿದೆ. ಆರೋಗ್ಯ ಸಿಬ್ಬಂದಿ ಮನೆ ಮನೆಗೆ ತೆರಳಿ ಔಷಧಿ ವಿತರಿಸುತ್ತಿದ್ದಾರೆ.