ಬೆಂಗಳೂರು: ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಚಲನವಲನದ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ದೊರೆತಿದೆ. ಕೆಫೆಯಲ್ಲಿ ಸ್ಫೋಟ ನಡೆಸಲು ಬಂದಿದ್ದ ಶಂಕಿತ ಆರೋಪಿ ಬ್ಯಾಗ್‌ಸಮೇತ ಬಸ್‌ನಿಂದ ಇಳಿಯುತ್ತಿರುವ ದೃಶ್ಯ ಸೆರೆಯಾಗಿದೆ.
ಐಟಿಪಿಎಲ್ ಮಾರ್ಗದಿಂದ ಬರುವ ಬಸ್‌ಗಳು ನಿಲ್ಲಿಸಲ್ಪಡುವ, ರಾಮೇಶ್ವರಂ ಕೆಫೆ ಮುಂಭಾಗದಲ್ಲೇ ಇದ್ದ ನಿಲ್ದಾಣದಲ್ಲಿ ಬಿಎಂಟಿಸಿ ಬಸ್‌ನಿಂದ ಇಳಿದ ಶಂಕಿತ, ನೇರವಾಗಿ ಕೆಫೆಯತ್ತ ಮುಖ ಮಾಡಿ ಹೊರಟಿದ್ದಾನೆ. ತಲೆಗೆ ಬಿಳಿ ಕ್ಯಾಪ್, ಹೆಗಲಿಗೆ ಬ್ಯಾಗ್ ಹಾಕಿಕೊಂಡು ಸಂಚರಿಸುತ್ತಿರುವುದನ್ನು ದೃಶ್ಯದಲ್ಲಿ ನೋಡಬಹುದು. ಹೀಗೆ ಗ್ರಾಹಕನ ನೆಪದಲ್ಲಿ ಕೆಫೆಗೆ ಬಂದು ಬಾಂಬ್ ಸ್ಫೋಟ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ.
ಪ್ರಕರಣದ ತನಿಖೆ ಎನ್ಐಎಗೆ ಹಸ್ತಾಂತರ: ದೇಶಾದ್ಯಂತ ಸಂಚಲನ ಮೂಡಿಸಿರುವ ಬೆಂಗಳೂರಿನ ದಿ ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆಯನ್ನು ಸೋಮವಾರ ಕೇಂದ್ರ ಗೃಹ ಸಚಿವಾಲಯ ರಾಷ್ಟ್ರೀಯ ತನಿಖಾ ಸಂಸ್ಥೆಗೆ ವಹಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಈ ಬಗ್ಗೆ ಎಫ್ಐಆರ್ ದಾಖಲಿಸಿಕೊಂಡಿರುವ ಸಂಸ್ಥೆ ತನಿಖೆ ಚುರುಕುಗೊಳಿಸಿದೆ.
ಘಟನೆಯ ಹಿನ್ನೆಲೆ:ಕಳೆದ ಶುಕ್ರವಾರ ಮಧ್ಯಾಹ್ನ ಕುಂದಲಹಳ್ಳಿಯ ಪ್ರಸಿದ್ಧ ಉಪಹಾರಗೃಹ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ನಡೆದಿತ್ತು. ಹೋಟೆಲ್ನಲ್ಲಿದ್ದ 30 ಜನರು ಹೊರಗೆ ಓಡಿ ಬಂದಿದ್ದು, 9 ಮಂದಿ ಗಾಯಗೊಂಡಿದ್ದರು. ಓರ್ವ ಮಹಿಳೆಗೆ ತೀವ್ರ ಗಾಯವಾಗಿತ್ತು. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ, ಎಫ್ಎಸ್ಎಲ್ ತಂಡ, ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ, ತನಿಖೆ ಕೈಗೊಂಡಿದ್ದರು.
ಸಿಸಿಟಿವಿ ಕ್ಯಾಮರಾಗಳ ದೃಶ್ಯಗಳಲ್ಲಿ ಶಂಕಿತ ಆರೋಪಿ ಸೆರೆಯಾಗಿದ್ದ. ಬಿಎಂಟಿಸಿ ಬಸ್ನಲ್ಲಿ ಬಂದು, ಕೆಫೆಯಲ್ಲಿ ಗ್ರಾಹಕನಂತೆ ರವೆ ಇಡ್ಲಿ ತಿಂದು, ತನ್ನಲ್ಲಿದ್ದ ಬ್ಯಾಗ್ ಅನ್ನು ಕೆಫೆಯ ಕೈ ತೊಳೆಯುವ ಜಾಗದಲ್ಲಿಟ್ಟು ಮತ್ತೆ ಬಿಎಂಟಿಸಿ ಬಸ್ನಲ್ಲಿ ವಾಪಸ್ ಹೋಗಿರುವುದು ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ವಿಡಿಯೋಗಳ ಆಧಾರದಲ್ಲಿ ಶಂಕಿತನ ಚಹರೆಯನ್ನು ಹಿಡಿದು, ಪೊಲೀಸರು ರಾಜ್ಯ ಮಾತ್ರವಲ್ಲದೆ ಪಕ್ಕದ ಕೇರಳ ಹಾಗೂ ತಮಿಳುನಾಡಿನಲ್ಲಿ ಆರೋಪಿ ಪತ್ತೆಗೆ ಬಲೆ ಬೀಸಿದ್ದರು. ಅದಲ್ಲದೆ ಶಂಕಿತನ ಚಹರೆಯನ್ನೇ ಹೋಲುವ ಕೆಲವು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ಕೂಡ ಕೈಗೊಂಡಿದ್ದರು. ಇದೀಗ ಆರೋಪಿಯ ಚಲನವಲನ ಸೆರೆಯಾಗಿರುವ ಮತ್ತೊಂದು ಸಿಸಿಟಿವಿ ದೃಶ್ಯಾವಳಿ ಸಿಕ್ಕಿದೆ.
ಇದನ್ನೂ ಓದಿ:ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ ಎನ್ಐಎಗೆ ಹಸ್ತಾಂತರ; FIR ದಾಖಲು, ತನಿಖೆ ಆರಂಭ