ಹುಬ್ಬಳ್ಳಿ:ನಗರದ ಉಣಕಲ್ನ ಅಚ್ಚವ್ವನ ಕಾಲೋನಿಯ ಕಟ್ಟಡವೊಂದರಲ್ಲಿ ನಡೆದ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ ಮತ್ತೋರ್ವ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಚಿಕಿತ್ಸೆ ಫಲಿಸದೇ ಕೆಎಂಸಿಆರ್ಐ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ.
ಪ್ರಕಾಶ ಬಾರಕೇರ (41) ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಸೋಮವಾರ ಸಂಜೆ ತೇಜಶ್ವರ ಸಾತರೆ (26) ಸಾವನ್ನಪ್ಪಿದ್ದರು. ಮೃತ ಪ್ರಕಾಶ ಬಾರಕೇರ ಮಗ ವಿನಾಯಕ ಬಾರಕೇರ ಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾನೆ.
ಡಿ. 22 ರಂದು ನಡೆದಂತಹ ಸಿಲಿಂಡರ್ ಸ್ಪೋಟ ಪ್ರಕರಣದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿದ್ದರು. ಈ ಪೈಕಿ 8 ಜನ ಅಯ್ಯಪ್ಪ ಮಾಲಾಧಾರಿಗಳು ಈಗ ಉಸಿರು ಚೆಲ್ಲಿದ್ದಾರೆ.
ಕುಟುಂಬಸ್ಥರ ಆಕ್ರಂದನ: ಪ್ರಕಾಶ ಬಾರಕೇರ ಸಾವನ್ನಪ್ಪಿದ್ದು, ಇಲ್ಲಿನ ಕಿಮ್ಸ್ ಶವಾಗಾರದ ಬಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ನಮ್ಮ ಮಗ ಬದುಕಿ ಬರ್ತಾನೆ ಅಂತಾ ಮಾಡಿದ್ದೆ. ಆದರೆ, ಬದುಕಿ ಬರಲಿಲ್ಲ ಅಯ್ಯಪ್ಪ ಸ್ವಾಮಿ ಅವನ್ನನ್ನು ಕರೆದುಕೊಂಡು ಬಿಟ್ಟ ಎಂದು ಪ್ರಕಾಶ ತಾಯಿ ಕಣ್ಣೀರು ಹಾಕಿದ್ದಾರೆ.
ಏನಿದು ಘಟನೆ?:ಡಿಸೆಂಬರ್ 22ರಂದು ಉಣಕಲ್ ಅಚ್ಚವ್ವ ಕಾಲೊನಿಯ ಕಟ್ಟಡವೊಂದರಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿತ್ತು. ಪ್ರತಿವರ್ಷ ಇಲ್ಲಿ ಅಯ್ಯಪ್ಪ ಸನ್ನಿಧಿಯಲ್ಲಿ ಪೂಜೆ ನಡೆಸಲಾಗುತ್ತಿತ್ತು. ಈ ವರ್ಷವೂ ಎಂದಿನಂತೆ ಅಯ್ಯಪ್ಪಸ್ವಾಮಿ ಮಾಲಾಧಾರಿಗಳು ತಮ್ಮ ವ್ರತವನ್ನು ಮುಗಿಸಿ, ಅಯ್ಯಪ್ಪನಿಗೆ ಪೂಜೆ ಸಲ್ಲಿಸಿ ನಿದ್ರೆ ಮಾಡುತ್ತಿದ್ದರು. ಈ ಸಂದರ್ಭದಲ್ಲಿ ಓರ್ವ ಅಯ್ಯಪ್ಪ ಮಾಲಾಧಾರಿಯ ಕಾಲು ಗ್ಯಾಸ್ ಸಿಲಿಂಡರ್ಗೆ ತಾಗಿದ ಪರಿಣಾಮ ಗ್ಯಾಸ್ ಸೋರಿಕೆಯಾಗಿತ್ತು. ದೇವರಿಗೆ ಹಚ್ಚಿದ್ದ ದೀಪ ಉರಿಯುತ್ತಿದ್ದರಿಂದ ಏಕಾಏಕಿ ಬೆಂಕಿ ಹೊತ್ತಿಕೊಂಡಿತ್ತು. ಘಟನೆಯಲ್ಲಿ 9 ಜನ ಅಯ್ಯಪ್ಪ ಮಾಲಾಧಾರಿಗಳು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ಆದರೆ ಅವರೆಲ್ಲ ಶೇ 50 ಕ್ಕಿಂತ ಹೆಚ್ಚು ಭಾಗ ಸುಟ್ಟಿದ್ದರಿಂದ ಚಿಕಿತ್ಸೆ ಫಲಿಸದೇ ಡಿ.26ರಂದು ಮುಂಜಾನೆ ನಿಜಲಿಂಗಪ್ಪ ಬೇಪುರಿ (58) ಹಾಗೂ ಸಂಜಯ ಸವದತ್ತಿ (20) ಎನ್ನುವ ಇಬ್ಬರು ಮಾಲಾಧಾರಿಗಳು ಅಸುನೀಗಿದ್ದರು. ಬಳಿಕ ಮತ್ತಿಬ್ಬರು ಅಯ್ಯಪ್ಪ ಮಾಲಾಧಾರಿಗಳಾದ ರಾಜು ಮೂಗೇರಿ (21) ಹಾಗೂ ಲಿಂಗರಾಜು ಬೀರನೂರ (24) ಕೂಡ ಚಿಕಿತ್ಸೆಗೆ ಸ್ಪಂದಿಸದೇ ಡಿ. 27ರಂದು ಮರಣ ಹೊಂದಿದ್ದರು. ಬಳಿಕ ಶಂಕರ ಚವ್ಹಾಣ್ (29) ಹಾಗೂ ಮಂಜುನಾಥ ವಾಗ್ಮೋಡೆ (22) ತೇಜಸ್ವರ್ ಸಾತರೆ (26) ಕೂಡ ಮೃತಪಟ್ಟಿದ್ದು, ತೀವ್ರ ಗಾಯಗೊಂಡಿರುವ ಪ್ರಕಾಶ್ ಬಾರಕೇರ್ (42) ಸಹ ಇಂದು ಇಹ ಲೋಕ ತ್ಯಜಿಸಿದ್ದಾರೆ.
5 ಲಕ್ಷ ರೂ. ಪರಿಹಾರ:ಗುರುವಾರ ಮೃತಪಟ್ಟ ಇಬ್ಬರು ಅಯ್ಯಪ್ಪ ಮಾಲಾಧಾರಿಗಳ ಕುಟುಂಬಗಳಿಗೆ ರಾಜ್ಯ ಸರ್ಕಾರವು ಈಗಾಗಲೇ 5 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದೆ. ಕೆಎಂಸಿಆರ್ಐ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಈ ಘೋಷಣೆ ಮಾಡಿದ್ದರು.