ಧಾರವಾಡ: ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಧಾರವಾಡದ ಅಂಜುಮನ್ ಇಸ್ಲಾಂ ಸಂಸ್ಥೆ ಕರೆ ನೀಡಿದ್ದ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದಲ್ಲಿ ಮುಸ್ಲಿಂ ಸಮುದಾಯದವರು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ, ಬಂದ್‌ಗೆ ಬೆಂಬಲ ಸೂಚಿಸಲಾಗಿದೆ. ಜೊತೆಗೆ ಬಂದ್ ಮಾಡಲಾದ ಅಂಗಡಿಗಳಿಗೆ ನೇಹಾ ಶ್ರದ್ಧಾಂಜಲಿಯ ಪೋಸ್ಟರ್ ಅಂಟಿಸಲಾಗಿದೆ. ಅಂಜುಮನ್ ಸಂಸ್ಥೆಯಿಂದ ಡಿಸಿ ಕಚೇರಿವರೆಗೆ ಕಪ್ಪು ಪಟ್ಟಿ ಕಟ್ಟಿಕೊಂಡು ಮೌನ ಮೆರವಣಿಗೆ ನಡೆಸುವ ಹಿನ್ನೆಲೆಯಲ್ಲಿ ಭಾರೀ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.
ಹುಬ್ಬಳ್ಳಿ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ಶನಿವಾರ ಮನವಿ ಮಾಡಿಕೊಂಡಿದ್ದರು.
ನೇಹಾಳ ಸಾವಿಗೆ ನ್ಯಾಯ ಸಿಗಬೇಕು ಎಂದು ಆಗ್ರಹಿಸಿ ಇಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆವರೆಗೆ ಅರ್ಧ ದಿನ ಬಂದ್‌ಗೆ ಕರೆ ನೀಡಿದ್ದರು. ಅಂಜುಮನ್ ಸಂಸ್ಥೆಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೌನ ಮೆರವಣಿಗೆ ಮಾಡಿ, ಕಪ್ಪುಪಟ್ಟಿ ಧರಿಸಿ 'ಜಸ್ಟೀಸ್ ಫಾರ್ ನೇಹಾ 'ಎಂದು ಅಂಗಡಿಗಳಿಗೆ ಭಿತ್ತಿಪತ್ರ ಅಂಟಿಸಲಿದ್ದಾರೆ. ಮೆರವಣಿಗೆಯಲ್ಲಿ ಅಂಜುಮನ್ ಸಂಸ್ಥೆ ಸದಸ್ಯರು ಮತ್ತು ಜನರು ಭಾಗವಹಿಸಲಿದ್ದಾರೆ.
ಅಂಜುಮನ್ ಕಾಲೇಜಿನ ಕೊಠಡಿಗೆ ನೇಹಾ ಹೆಸರು:ಭಾನುವಾರ ಸುದ್ದಿಗೋಷ್ಠಿ ನಡೆಸಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಅವರು ಬಂದ್‌ಗೆ ಕರೆ ನೀಡಿರುವ ಮಾಹಿತಿ ನೀಡಿದರು. ಇದೇ ವೇಳೆ, ಅಂಜುಮನ್ ಕಾಲೇಜಿನ ಒಂದು ಕೊಠಡಿಗೆ ನೇಹಾ ಹೆಸರಿಟ್ಟು, ಆ ಕೊಠಡಿಯನ್ನು ಅವರ ತಂದೆ ತಾಯಿಯಿಂದಲೇ ಉದ್ಘಾಟನೆ ಮಾಡಿಸಲು ಸಂಸ್ಥೆ ತೀರ್ಮಾನಿಸಿದೆ ಎಂದು ತಿಳಿಸಿದ್ದರು.
ಅಂಜುಮನ್ ಸಂಸ್ಥೆಯಿಂದ ಸಮಗ್ರ ಬಂದ್‌ಗೆ ಕರೆ ನೀಡಲು ಅವಕಾಶ ಇಲ್ಲ. ಹೀಗಾಗಿ ನಮ್ಮ ಸಮುದಾಯದವರಿಗೆ ಮಾತ್ರ ಕರೆ ನೀಡಿದ್ದೇವೆ. ಒತ್ತಾಯಪೂರ್ವಕವಾಗಿ ಬಂದ್ ಮಾಡಲು ಹೇಳಿಲ್ಲ. ಸ್ವಯಂಪ್ರೇರಿತ ಬಂದ್ ಮಾಡುತ್ತಿದ್ದೇವೆ ಎಂದು ತಮಟಗಾರ ಮಾಹಿತಿ ನೀಡಿದ್ದರು.