ಮೈಸೂರು: ದಕ್ಷಿಣಿ ಕಾಶಿ ನಂಜನಗೂಡಿನ ಶ್ರೀಕಂಠೇಶ್ವರ ದೇವಾಲಯದ ವತಿಯಿಂದ ಪಟ್ಟಣದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ ನಡೆಯಿತು. ಇಲ್ಲಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ ಉತ್ಸವ ಮೂರ್ತಿಗಳನ್ನು ತಂದು ಪೂಜೆ ಮಾಡಲಾಯಿತು.
ಅಂಧಕಾಸುರ ಭಾವಚಿತ್ರದ ರಂಗೋಲಿಯನ್ನು ಅಳಿಸಿ ಹಾಕುವ ಆಚರಣೆ ಇದಾಗಿದ್ದು, ಇದಕ್ಕೆ ಐತಿಹಾಸಿಕ ಹಿನ್ನೆಲೆಯೂ ಉಂಟು. ಧರ್ನುಮಾಸದ, ಆರಿದ್ರ ನಕ್ಷತ್ರದ ಹುಣ್ಣಿಮೆಯ ಹಿಂದಿನ ದಿನ ದೇವಾಲಯದ ವತಿಯಿಂದ ರಾಕ್ಷಸ ಮಂಟಪದ ಬಳಿ ಅಂಧಕಾಸುರ ರಾಕ್ಷಸನನ್ನ ಹೋಲುವ ರಾಕ್ಷಸನ ಚಿತ್ರವನ್ನ ರಂಗೋಲಿಯಲ್ಲಿ ಬಿಡಲಾಗುತ್ತದೆ. ಆ ರಂಗೋಲಿಯ ಬಳಿ ಪೂಜೆ, ಧಾರ್ಮಿಕ ವಿಧಿ - ವಿಧಾನಗಳ ಮೂಲಕ ಆ ಭಾವಚಿತ್ರಕ್ಕೆ ಜೀವತುಂಬಿ ಬಳಿಕ ರಾಕ್ಷಸ ಭಾವಚಿತ್ರಕ್ಕೆ ದಿಗ್ಬಂಧನ ಹಾಕಲಾಗುತ್ತದೆ. ಬಳಿಕ ತಾಂಡವೇಶ್ವರ ಹಾಗೂ ಪಾರ್ವತಿ ದೇವಿಯ ಉತ್ಸವ ಮೂರ್ತಿಗಳನ್ನ ತಂದು ಅಂಧಕಾಸುರ ರಂಗೋಲಿಯ ಭಾವಚಿತ್ರದ ಮೇಲೆ ಹೆಜ್ಜೆ ಹಾಕಿ ಅದನ್ನು ಅಳಿಸುವ ಮೂಲಕ ಅಂಧಕಾಸುರ ವಧೆ ಆಚರಣೆ ಆಚರಿಸುವುದು ರೂಢಿ. ಇದನ್ನ ಪ್ರತಿ ವರ್ಷ ಹುಣ್ಣಿಮೆ ದಿನ ಆಚರಿಸಿಕೊಂಡು ಬರಲಾಗುತ್ತಿದೆ.
ಅಂಧಕಾಸುರ ಸಂಹಾರ ಧಾರ್ಮಿಕ ಕಾರ್ಯಕ್ರಮ (ETV Bharat) ಐತಿಹಾಸಿಕ ಹಿನ್ನೆಲೆ: ಅಂಧಕಾಸುರ ಆಚರಣೆಯು ತನ್ನದೇ ಆದ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಪುರಾತನ ಕಾಲದಲ್ಲಿ ರಾಕ್ಷಸರು ದೇವಾನುದೇವತೆಗಳಿಗೆ, ಋಷಿ ಮುನಿಗಳಿಗೆ ತೊಂದರೆ ಕೊಡುತ್ತಿದ್ದರು. ಅದರಲ್ಲಿ ಕುರೂಪಿಯು ಹಾಗೂ ಕುರುಡನೂ ಆದ ಅಂಧಕಾಸುರ ಎಂಬ ರಾವಣ ದೇವಾನುದೇವತೆಗಳಿಗೆ, ಋಷಿ ಮುನಿಗಳಿಗೆ ಹಾಗೂ ಜನರಿಗೆ ಬಹಳ ತೊಂದರೆ ಕೊಡುತ್ತಿದ್ದ. ಆಗ ದೇವಾನುದೇವತೆಗಳು ಅಂಧಕಾಸುರನ ಕಿರುಕುಳದ ಬಗ್ಗೆ ವಿಷ್ಣು ಬಳಿ ಕೇಳಿದಾಗ, ವಿಷ್ಣು ಈ ವಿಚಾರವನ್ನ ಈಶ್ವರ ಬಳಿ ಕೇಳಿತ್ತಾರೆ.
ಈಶ್ವರನು ಧರ್ನುಮಾಸದ ಹುಣ್ಣಿಮೆಯ ದಿನ ಈ ಅಂಧಕಾಸುರನ ರಾಕ್ಷಸನ ಸಂಹಾರ ಮಾಡಿದ್ದು, ಅದಕ್ಕಾಗಿ ಅದೇ ದಿನ ನಂಜನಗೂಡಿನ ರಾಕ್ಷಸ ಮಂಟಪದ ಬಳಿ ಅಂಧಕಾಸುರನ ಭಾವಚಿತ್ರವನ್ನ ರಂಗೋಲಿಯಲ್ಲಿ ಬಿಡಿಸಿ, ಶಿವ ರೂಪವಾದ ತಾಂಡವೇಶ್ವರನ ಉತ್ಸವ ಮೂರ್ತಿ ಹಾಗೂ ಪಾರ್ವತಿ ದೇವಿಯನ್ನ ತಂದು ಹೀಗೆ ರಾಕ್ಷಸನ ವಧೆ ಮಾಡಲಾಗುತ್ತದೆ ಎಂದು ಶ್ರೀಕಂಠೇಶ್ವರ ದೇವಾಲಯದ ಹಿರಿಯ ಅರ್ಚಕರಾದ ನೀಲಕಂಠ ಶಾಸ್ತ್ರಿಗಳು ಈಟಿವಿ ಭಾರತಕ್ಕೆ ಮಾಹಿತಿ ನೀಡಿದರು.
ಇದನ್ನೂ ಓದಿ: ಭಕ್ತಿಯ ಮಹಾಕುಂಭದ ಭವ್ಯ ಶುಭಾರಂಭ; ಇಂದಿನಿಂದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಧಾರ್ಮಿಕ ವೈಭವ, 35 ಕೋಟಿಗೂ ಹೆಚ್ಚು ಭಕ್ತರ ಆಗಮನದ ನಿರೀಕ್ಷೆ - MAHA KUMBH MELA 2025