ಬೆಂಗಳೂರು/ ನವದೆಹಲಿ : ಮುಂಬರುವ ಲೋಕಸಭೆ ಚುನಾವಣೆ ಹಾಗೂ ಪ್ರಸಕ್ತ ರಾಜ್ಯಸಭೆ ಚುನಾವಣೆ ಕಾರ್ಯತಂತ್ರ ಕುರಿತಂತೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಕೇಂದ್ರ ಗೃಹಸಚಿವ ಅಮಿತ್ ಶಾ ಮಾತುಕತೆ ನಡೆಸಿದರು.
ನವದೆಹಲಿ ಅವರ ನಿವಾಸದಲ್ಲಿ ಅಮಿತ್ ಶಾ ಅವರನ್ನು ಹೆಚ್ ಡಿ ಕುಮಾರಸ್ವಾಮಿ ಭೇಟಿಯಾಗಿ ಸುಮಾರು ಅರ್ಧಗಂಟೆ ಕಾಲ ರಾಜ್ಯಸಭೆ ಚುನಾವಣೆ ಕಾರ್ಯತಂತ್ರ ಹಾಗೂ ಲೋಕಸಭೆ ಚುನಾವಣೆ ಸಿದ್ಧತೆ, ಬಿಜೆಪಿ-ಜೆಡಿಎಸ್ ನಡುವೆ ಕ್ಷೇತ್ರಗಳ ಹಂಚಿಕೆ, ಪ್ರಚಲಿತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿರುವುದಾಗಿ ತಿಳಿದುಬಂದಿದೆ.
ನಿನ್ನೆ ಸಂಜೆಯೇ ದೆಹಲಿಗೆ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರೊಂದಿಗೆ ತೆರಳಿದ್ದ ಕುಮಾರಸ್ವಾಮಿ ಅವರು ಅಮಿತ್ ಶಾ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿದರು.
ವಿಧಾನಪರಿಷತ್‍ನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪಚುನಾವಣೆಯಲ್ಲಿ ಎನ್‍ಡಿಎ ಅಭ್ಯರ್ಥಿಗೆ ಉಂಟಾಗಿರುವ ಸೋಲಿನ ಪರಾಮರ್ಶೆಯನ್ನು ಈ ವೇಳೆ ಉಭಯ ನಾಯಕರು ಮಾಡಿದರು. ಇದೇ ವೇಳೆ ರಾಜ್ಯಸಭೆ ಚುನಾವಣೆಯಲ್ಲಿ ಎನ್‍ಡಿಎ 2ನೇ ಅಭ್ಯರ್ಥಿ ಕುಪೇಂದ್ರರೆಡ್ಡಿ ಅವರ ಗೆಲುವಿನ ಸಾಧ್ಯಾಸಾಧ್ಯತೆಗಳ ಬಗ್ಗೆ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಜೆಡಿಎಸ್‍ಗೆ ಹಾಸನ, ಮಂಡ್ಯ, ಕೋಲಾರ ಕ್ಷೇತ್ರಗಳನ್ನು ಬಿಟ್ಟುಕೊಟ್ಟು ಉಳಿದ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಬಗ್ಗೆಯೂ ಉಭಯ ನಾಯಕರು ಸಮಾಲೋಚಿಸಿದ್ದಾರೆ ಎನ್ನಲಾಗಿದೆ. ರಾಜ್ಯದಲ್ಲಿ ಲೋಕಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗೆಲ್ಲಲು ಈಗಾಗಲೇ ಜೆಡಿಎಸ್ ರಂಗ ತಾಲೀಮು ಆರಂಭಿಸಿದೆ. ಆದರೆ ಕ್ಷೇತ್ರ ಹಂಚಿಕೆ ಮಾತ್ರ ಅಂತಿಮವಾಗಿಲ್ಲ. ಹೀಗಾಗಿ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ದಿಢೀರ್ ದೆಹಲಿ ಪ್ರವಾಸ ಮಾಡಿದ್ದಾರೆ.
ದೆಹಲಿಯಲ್ಲಿ ಕುಮಾರಸ್ವಾಮಿ ಮತ್ತು ಅಮಿತ್ ಶಾ ಮಾತುಕತೆ ನಡೆಸಿದ್ದಾರೆ. ಈ ವೇಳೆ ಮಂಡ್ಯ, ಹಾಸನ, ಕೋಲಾರ ಟಿಕೆಟ್ ಜೆಡಿಎಸ್‍ಗೆ ಫಿಕ್ಸ್ ಎಂದು ಅಮಿತ್ ಶಾ ಮಾತುಕೊಟ್ಟಿದ್ದು, ಮಂಡ್ಯ, ಹಾಸನದಲ್ಲಿ ನಿಮ್ಮ ಶಾಸಕರಿಂದಲೇ ಭಿನ್ನಾಭಿಪ್ರಾಯ ವ್ಯಕ್ತವಾಗಿದೆ ಎಂದು ಕುಮಾರಸ್ವಾಮಿ ದೂರಿದ್ದಾರೆ.
ಮಂಡ್ಯ ವಿಚಾರದಲ್ಲಿ ಮೇಲುಗೈ : ಕೇಂದ್ರ ಸಚಿವ ಅಮಿಶ್ ಶಾ ಅವರೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತುಕತೆ ನಡೆಸಿ ಮಂಡ್ಯ ವಿಚಾರದಲ್ಲಿ ಮೇಲುಗೈ ಸಾಧಿಸಿದ್ದಾರೆ. ತುಮಕೂರು, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಜಿಲ್ಲೆಯ ಬಗ್ಗೆ ಮತ್ತೊಮ್ಮೆ ಚರ್ಚೆ ಮಾಡೋಣ ಎಂದು ಹೈಕಮಾಂಡ್ ಹೆಚ್ಡಿಕೆಗೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಮಂಡ್ಯ ಕ್ಷೇತ್ರ ಜೆಡಿಎಸ್ ಪಾಲಾಗುವ ಸಾಧ್ಯತೆ ಇರುವುದರಿಂದ ಸುಮಲತಾ ಮತ್ತೆ ಪಕ್ಷೇತರವಾಗಿ ಸ್ಪರ್ಧೆ ಮಾಡ್ತಾರಾ? ಎಂಬುದನ್ನು ಕಾದು ನೋಡಬೇಕಿದೆ. ಮಂಡ್ಯ ಬಿಜೆಪಿ-ಜೆಡಿಎಸ್ ಅಭ್ಯರ್ಥಿಯಾಗಿ ಡಾ. ಮಂಜುನಾಥ್ ಸ್ಪರ್ಧೆ ಖಚಿತವಾಗಿದೆ ಎನ್ನಲಾಗಿದೆ. ಬಿಜೆಪಿ ಹೈಕಮಾಂಡ್ ಡಾ. ಮಂಜುನಾಥ್ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಟ್ಟ ಹಿನ್ನೆಲೆಯಲ್ಲಿ ಸುಮಲತಾಗೆ ಇದು ಹಿನ್ನಡೆ ಎಂದೇ ಹೇಳಲಾಗ್ತಿದೆ. ಹಾಸನ ಲೋಕಸಭೆ ಕ್ಷೇತ್ರದಿಂದ ಪ್ರಜ್ವಲ್ ರೇವಣ್ಣ ಸ್ಪರ್ಧೆ, ಹಾಗೆ ಕೋಲಾರ ಲೋಕಸಭಾ ಕ್ಷೇತ್ರದಿಂದ ನಿಸರ್ಗ ನಾರಾಯಣಸ್ವಾಮಿ ಸ್ಪರ್ಧೆ ಬಹುತೇಕ ಖಚಿತವಾಗಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ :ಧಮ್ಕಿ ಸಂಸ್ಕೃತಿಯಿಂದ ಬಂದವರು ಯಾರು?, ಸೆಟ್ಲ್ಮೆಂಟ್ ಮಾಡುವ ಸಂಸ್ಕೃತಿ ನಮ್ಮದಲ್ಲ: ಹೆಚ್ಡಿಕೆ