ಬೆಂಗಳೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಮುಡಾ) ಮುಖ್ಯಮಂತ್ರಿ ಅವರ ಪತ್ನಿ ಬಿ.ಎಂ.ಪಾರ್ವತಿ ಅಕ್ರಮವಾಗಿ 14 ನಿವೇಶನ ಪಡೆದಿದ್ದಾರೆ ಎಂಬ ಆರೋಪ ಸಂಬಂಧ ಸಿದ್ದರಾಮಯ್ಯ ಸೇರಿ ಐವರು ಆರೋಪಿಗಳ ವಿರುದ್ಧ ವಿಶೇಷ ತನಿಖಾ ದಳ ಅಥವಾ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆಗೆ ಆದೇಶಿಸಬೇಕು ಎಂದು ಕೋರಿ ಬೆಂಗಳೂರಿನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಕೆಯಾಗಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ಸಲ್ಲಿಸಿರುವ ಖಾಸಗಿ ದೂರಿನಲ್ಲಿ ಮುಖ್ಯಮಂತ್ರಿ ಸಿದ್ದಾರಾಮಯ್ಯ, ಅವರ ಪತ್ನಿ ಪಾರ್ವತಿ, ಭಾವ ಮೈದುನ ಮಲ್ಲಿಕಾರ್ಜುನ ಸ್ವಾಮಿ, ಜೆ.ದೇವರಾಜು ಮತ್ತಿತರನ್ನು ಆರೋಪಿಗಳನ್ನಾಗಿಸಲಾಗಿದೆ. ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ದೂರು ಸ್ವೀಕರಿಸಿದ್ದು, ನಾಳೆ ವಿಚಾರಣೆ ನಡೆಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮಯ್ಯ ಮತ್ತು ಇತರೆ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ 1988ರ ಸೆಕ್ಷನ್ 9 & 13, ಬೇನಾಮಿ ಆಸ್ತಿ ವರ್ಗಾವಣೆ ನಿಷೇಧ ಕಾಯಿದೆ 1988 ಮತ್ತು ಕರ್ನಾಟಕ ಭೂಮಿ ವಶ ಕಾಯಿದೆ 2011ರ ಸೆಕ್ಷನ್ 3 & 4ರ ಅಡಿ ಸಂಜ್ಞೆ ಪರಿಗಣಿಸಿ, ಸಿಬಿಐ ಅಥವಾ ರಾಜ್ಯ ಸರ್ಕಾರ/ಲೋಕಾಯುಕ್ತ ಪೊಲೀಸ್ ವಿಭಾಗ ಹೊರತುಪಡಿಸಿ ಬೇರಾವುದೇ ಸ್ವತಂತ್ರ ತನಿಖಾ ಸಂಸ್ಥೆಗೆ ಬಿಎನ್‌ಎಸ್‌ಎಸ್ ಸೆಕ್ಷನ್ 202 ಜೊತೆಗೆ ಬಿಎನ್‌ಎಸ್ ಸೆಕ್ಷನ್ 225 ಅಡಿ ತನಿಖೆ ನಡೆಸಲು ಆದೇಶಿಸಬೇಕು. ಆ ನಂತರ ಆರೋಪಿಗಳಿಗೆ ಸಮನ್ಸ್ ಜಾರಿ ಮಾಡಿ, ಕಾನೂನಿನ ಅಡಿ ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಒತ್ತಾಯಿಸಲಾಗಿದೆ.
ಮುಡಾದಲ್ಲಿ ಅಕ್ರಮ ನಿವೇಶನ ಹಂಚಿಕೆ ಆರೋಪ ಸಂಬಂಧ ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲರು ಶೋಕಾಸ್ ನೋಟಿಸ್ ನೀಡಿದ್ದಾರೆ. ಜೊತೆಗೆ ಸಿಎಂ ವಿರುದ್ಧ ಬಿಜೆಪಿ ಜೆಡಿಎಸ್ ಮೈತ್ರಿ ಪಕ್ಷಗಳು ಬೆಂಗಳೂರಿನಿಂದ ಮೈಸೂರು ಚಲೋ ಪಾದಯಾತ್ರೆ ನಡೆಸುತ್ತಿವೆ. ಇದೀಗ ಸಿಎಂ ವಿರುದ್ಧ ಖಾಸಗಿ ದೂರು ದಾಖಲಾಗಿದೆ.
ಇದನ್ನೂ ಓದಿ:ಒಂದೇ ವೇದಿಕೆಯಲ್ಲಿ ಕಾಂಗ್ರೆಸ್, ಪ್ರತಿಪಕ್ಷಗಳ ಶಕ್ತಿ ಪ್ರದರ್ಶನ: ರಾಜಕೀಯ ಮೇಲಾಟಕ್ಕೆ ಸಾಕ್ಷಿಯಾಗಲಿದೆ ಮೈಸೂರು - Congress BJP Rally