ಬಾಲಕನ ತಾಯಿ ಆರೋಪ (ETV Bharat) ರಾಯಚೂರು: ನಗರದ ಆಶ್ರಮ ಒಂದರಲ್ಲಿ ಅಮಾನವೀಯ ಘಟನೆಯೊಂದು ಬೆಳಕಿಗೆ ಬಂದಿದೆ. ವಿದ್ಯಾರ್ಥಿಯೊಬ್ಬನಿಗೆ ಮನಸೋಇಚ್ಛೆ ಥಳಿಸಿ ಚಿಂತ್ರಹಿಂಸೆ ನೀಡಿರುವ ಆರೋಪ ಪ್ರಕರಣ ಇದಾಗಿದೆ. ನಗರದ ಸ್ಟೇಷನ್ ರಸ್ತೆಯಲ್ಲಿರುವ ಆಶ್ರಮವೊಂದರಲ್ಲಿ ಈ ಘಟನೆ ನಡೆದಿದೆ. ಆಶ್ರಮದಲ್ಲಿನ ಸ್ವಾಮೀಜಿ ವಿದ್ಯಾರ್ಥಿಗೆ ಥಳಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಮಗುವಿನ ತಾಯಿಯ ಆರೋಪವೇನು!?: ನನಗೆ ಇಬ್ಬರು ಮಕ್ಕಳು. ನಾವು ಅವರಿಬ್ಬರನ್ನು ಆಶ್ರಮದಲ್ಲಿ ಓದಲು ಬಿಟ್ಟಿದ್ದೇನೆ. ನಾನು ಆಶ್ರಮಕ್ಕೆ ಭೇಟಿ ನೀಡಿದ್ದಾಗ ನನ್ನ ಕಿರಿಯ ಮಗನ ಮೇಲೆ ಮನಸೋಇಚ್ಛೆ ಹಲ್ಲೆ ಮಾಡಿರುವುದು ನನ್ನ ಹಿರಿಯ ಮಗನ ಮೂಲಕ ತಿಳಿಯಿತು. ಒಂದು ಪೆನ್ ಸಂಬಂಧ ಮಗುವಿನ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ವಾಮೀಜಿ ಅವರನ್ನು ಕೇಳಿದ್ರೆ ನೀವು ನನ್ನನ್ನು ಜೈಲಿಗೆ ಕಳುಹಿಸಿದ್ರು, ನಾನು ಹೊರಗೆ ಬಂದು ಇದೇ ರೀತಿ ಮಾಡುತ್ತೇನೆ ಎಂದು ಹೇಳುತ್ತಾನೆ ಅಂತಾ ಸಂತ್ರಸ್ತ ಮಗುವಿನ ತಾಯಿ ಆರೋಪಿಸಿದ್ದಾರೆ. ನನ್ನ ಮಗನಿಗೆ ಆದ ರೀತಿ ಮತ್ಯಾವ ಮಕ್ಕಳಿಗೂ ಆಗಬಾರದು. ಹೀಗಾಗಿ ಸ್ವಾಮೀಜಿ ವಿರುದ್ಧ ದೂರು ಕೊಟ್ಟಿದ್ದೇವೆ ಎಂದು ಸಂತ್ರಸ್ತ ಮಗುವಿನ ತಾಯಿ ಹೇಳಿದರು.
ಅಧಿಕಾರಿಗಳು ಹೇಳಿದ್ದು ಹೀಗೆ: ಮಾಧ್ಯಮಗಳ ಜೊತೆ ಮಾತನಾಡಿದ ರಾಯಚೂರು ಜಿಲ್ಲೆಯ ಮಕ್ಕಳ ಸಹಾಯವಾಣಿ ಇಲಾಖೆಯ ಸಂಯೋಜಕ ಸುದರ್ಶನ, ಬಾಲಕನ ಮೇಲೆ ಸ್ವಾಮೀಜಿಯೊಬ್ಬರು ಹಲ್ಲೆ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಈಗಾಗಲೇ ಮಗುವನ್ನು ರಕ್ಷಿಸಲಾಗಿದೆ. ಈ ಘಟನೆಗೆ ಸಂಬಂಧಪಟ್ಟಂತೆ ಪೊಲೀಸ್ ಅಧಿಕಾರಿಗಳು ಮತ್ತು ನಮ್ಮ ಹಿರಿಯ ಅಧಿಕಾರಿಗಳ ಜೊತೆ ನಾನು ಮಾತನಾಡಿದ್ದೇನೆ. ಸ್ವಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ ಎಂದರು.
ಮಕ್ಕಳ ರಕ್ಷಣಾ ಘಟಕ, ಮಕ್ಕಳ ಸಹಾಯವಾಣಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಸಂತ್ರಸ್ತ ಮಗುವಿಗೆ ರಕ್ಷಣೆ ಕೊಡಲಾಗುವುದು. ಮಗುವಿನ ಮೇಲೆ ಹಲ್ಲೆ ಮಾಡಿದವರ ವಿರುದ್ಧ ಮಕ್ಕಳ ರಕ್ಷಣಾ ಆಯೋಗಕ್ಕೆ ಪತ್ರ ಬರೆಯುತ್ತೇವೆ. ಮುಂದೆ ಅವರ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳುವಂತೆ ಕ್ರಮ ವಹಿಸುತ್ತೇವೆ ಎಂದು ತಿಳಿಸಿದರು.
ಮಗುವಿನ ಮೇಲೆ ದೌರ್ಜನ್ಯವಾಗಿದೆ. ಜೆಜೆಎ ಕಾನೂನಿನಡಿ ಅಪರಾಧ ಎಸಗಿದವರ ವಿರುದ್ಧ ಶಿಕ್ಷೆಯಾಗುತ್ತದೆ. ಇದರ ಮೊತೆ ಐಪಿಸಿ ಸೆಕ್ಷನ್ ಅಡಿ ಶಿಕ್ಷೆ ಆಗುತ್ತದೆ. ಮಕ್ಕಳ ಮೇಲೆ ಯಾರೇ ದೌರ್ಜನ್ಯ ಮಾಡಿದ್ರೂ ಸಹ ಆರೋಪಿಗಳಿಗೆ ಶಿಕ್ಷೆ ಆಗುತ್ತದೆ. ಇನ್ನು ಮಗುವಿನ ಮೇಲೆ ದೈಹಿಕ ಹಿಂಸೆ ಮತ್ತು ಮಾನಸಿಕ ಕಿರುಕುಳ ಮಾಡಿದ್ರೆ ಜೆಜೆಎ ಮತ್ತು ಐಪಿಸಿ ಸೆಕ್ಷನ್ ಅಡಿ ಶಿಕ್ಷೆಗೆ ಒಳಪಡುತ್ತಾರೆ. ಒಂದು ವೇಳೆ ಮಗುವಿನ ಮೇಲೆ ಲೈಂಗಿಕ ಕಿರುಕುಳ ನೀಡಿದ್ರೆ ಪೋಕ್ಸೋ ಕಾಯ್ದೆಯಡಿ ಆರೋಪಿಗೆ ಶಿಕ್ಷೆಯಾಗುತ್ತದೆ ಎಂದು ಮಾಹಿತಿ ನೀಡಿದರು.
ಮಗುವನ್ನು ಗಮನಿಸಿದ್ರೆ ದೈಹಿಕ ಮತ್ತು ಮಾನಸಿಕ ಹಲ್ಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ. ನಾವು ಇದನ್ನು ದೌರ್ಜನ್ಯವೆಂದು ಪರಿಗಣಿಸುತ್ತೇವೆ. ಮಕ್ಕಳ ಮೇಲೆ ಯಾರೇ ದೌರ್ಜನ್ಯ ಎಸಗಿದ್ರು ಸಹ ಅದು ಶಿಕ್ಷಾರ್ಹ ಅಪರಾಧವಾಗಿದೆ ಎಂದು ರಾಯಚೂರು ಜಿಲ್ಲೆಯ ಮಕ್ಕಳ ಸಹಾಯವಾಣಿ ಇಲಾಖೆಯ ಸಂಯೋಜಕ ಸುದರ್ಶನ್ ಮಾಹಿತಿ ನೀಡಿದರು. ಇನ್ನು ಸ್ವಾಮೀಜಿ ವಿರುದ್ಧ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ:ಯುವತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗೆ 10 ವರ್ಷ ಕಾರಾಗೃಹ ಶಿಕ್ಷೆ - Rape case Judgement