ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): "ಎಲ್ಲ ಸರ್ಕಾರಗಳು ರೈತ ವಿರೋಧಿ, ಜನ ವಿರೋಧಿಯಾಗಿವೆ" ಎಂದು ಬಹುಭಾಷಾ ನಟ ಪ್ರಕಾಶ್ ರಾಜ್ ಆಕ್ರೋಶ ವ್ಯಕ್ತಪಡಿಸಿದರು.
ದೇವನಹಳ್ಳಿ ತಾಲೂಕು ಚನ್ನರಾಯಪಟ್ಟಣ ಹೋಬಳಿಯ ರೈತರು ಭೂಸ್ವಾಧೀನವನ್ನು ವಿರೋಧಿಸಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಎಲ್ಲ ರಾಜಕಾರಣಿಗಳಿಗೂ ರೈತರು ಚುನಾವಣೆಯಲ್ಲಿ ವೋಟು ಹಾಕುವ ಬಟನ್‍ಗಳಷ್ಟೇ ಆಗಿದ್ದಾರೆ ಹೊರತು ಬೇರೆ ಏನೂ ಅಲ್ಲ. ಇದನ್ನು ಸಹಿಸಿಕೊಂಡಿರುವುದಕ್ಕೆ ಆಗುವುದಿಲ್ಲ, ಹೋರಾಟ ನಡೆಯಬೇಕು" ಎಂದರು.
"ಫಲವತ್ತಾದ ಭೂಮಿ ಮೇಲೆ ಕೈಗಾರಿಕೆಗಳನ್ನು ಕಟ್ಟುತ್ತಾ ಹೋದರೆ ಹೊಟ್ಟೆಗೆ ಏನು ತಿಂತಿರಾ?. ರೈತನಿಗೆ ಭೂಮಿ ಆಸ್ತಿಯಲ್ಲ, ಅದು ಅವನ ಬದುಕು, ಸ್ವಾಭಿಮಾನ, ಗುರುತು ಮತ್ತು ಅವನ ಹೆಮ್ಮೆ. ಅದನ್ನು ನೀವು ಹೇಗೆ ಕಿತ್ತುಕೊಳ್ಳುತ್ತೀರಿ?. ಬಂಡವಾಳಶಾಹಿಗಳಿಗೆ ರೈತನ ಮತ್ತು ಭೂಮಿ ನಡುವಿನ ಸಂಬಂಧ ಅರ್ಥವಾಗುವುದಿಲ್ಲ" ಎಂದು ಕಿಡಿಕಾರಿದರು.
"ಇಲ್ಲಿ ಹೋರಾಡುತ್ತಿರುವ ರೈತರು ನೂರಾರು ಎಕರೆ ಜಮೀನು ಇಟ್ಟುಕೊಂಡವರಲ್ಲ, ಅವರಿಗಿರುವುದು ಒಂದೆರಡು ಎಕರೆ ಮಾತ್ರ. ಅದರೊಳಗೆ ಈ ರೈತರು ಬದುಕುತ್ತಿದ್ದಾರೆ. ಸರ್ಕಾರದವರು ಯಾರೂ ಅವರಿಗೆ ಕೆಲಸ ಕೊಡುತ್ತಿಲ್ಲ. ರೈತರು ಸ್ವಂತ ಕಾಲ ಮೇಲೆ ನಿಂತುಕೊಂಡು ಭೂಮಿ ಜೊತೆಗೆ ಮಾತನಾಡುತ್ತಾ, ತಲತಲಾಂತರದಿಂದ ಬದುಕನ್ನು ಕಟ್ಟಿಕೊಂಡು ಭವಿಷ್ಯ ನೋಡಿಕೊಳ್ಳುತ್ತಿರುವವರು" ಎಂದು ಪ್ರಕಾಶ್ ರಾಜ್ ರೈತರ ಪರ ಧ್ವನಿ ಎತ್ತಿದರು.
ಇದನ್ನೂ ಓದಿ:ನಕ್ಸಲರನ್ನ ಮುಖ್ಯವಾಹಿನಿಗೆ ತರಲು ಸರ್ಕಾರ ಬಯಸುತ್ತದೆ, ಹಿಂಸಾಚಾರ ಮಾಡಿದರೆ ಕಠಿಣ ಕ್ರಮ : ಸಿಎಂ ಸಿದ್ದರಾಮಯ್ಯ