ದೇವನಹಳ್ಳಿ:ಜನರ ಪ್ರಯಾಣವನ್ನು ಇನ್ನಷ್ಟು ಮಾಧುರ್ಯ ಹಾಗೂ ಕಾಯುವಿಕೆಯ ಸಮಯವನ್ನು ಸುಮಧುರಗೊಳಿಸುವ ಉದ್ದೇಶದಿಂದ ಏರ್‌ಪೋರ್ಟ್ ಗೀತೆಯನ್ನು ಬೆಂಗಳೂರು ಕೆಂಪೇಗೌಡ ವಿಮಾನ ನಿಲ್ದಾಣವು ಬಿಡುಗಡೆ ಮಾಡಿದೆ. ಗ್ರ್ಯಾಮಿ ಪ್ರಶಸ್ತಿ ವಿಜೇತ ರಿಕಿ ಕೇಜ್ ಸಂಯೋಜನೆಯ ಬೆಂಗಳೂರು ವಿಮಾನ ನಿಲ್ದಾಣದ ಅಧಿಕೃತ ಗೀತೆಯು ಇಂದು ಬಿಡುಗಡೆಗೊಂಡಿದೆ.
ಡೈನಾಮಿಕ್ ದ್ವಿಭಾಷಾ ಟ್ರ್ಯಾಕ್ ಅನಾವರಣಗೊಂಡಿದ್ದು, ಬಾರಿ ಗ್ರ್ಯಾಮಿ ಪ್ರಶಸ್ತಿ ವಿಜೇತ ಲೋನಿಪಾರ್ಕ್ ಮತ್ತು ಕನ್ನಡದ ಗಾಯಕ ಸಿದ್ಧಾರ್ಥ ಬೆಳ್ಮಣ್ಣು ಸುಮಧುರ ಕಂಠದಲ್ಲಿ ಗೀತೆಯು ಮೂಡಿಬಂದಿದೆ. ಇಂಗ್ಲಿಷ್ ಮತ್ತು ಕನ್ನಡ ಭಾಷೆಯ ಮಿಶ್ರಣದಲ್ಲಿ ಗೀತೆ ಹೊರಹೊಮ್ಮಿದೆ.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದ ಸಮಾರಂಭದಲ್ಲಿ ಗೀತೆಯು ಪ್ರಥಮ ಪ್ರದರ್ಶನಗೊಂಡು, ಸಾಮಾಜಿಕ ಮಾಧ್ಯಮಗಳಲ್ಲಿ ರಿಲೀಸ್ ಮಾಡಲಾಗಿದೆ. ಇದು ಸ್ಪೂಟಿಫೈ, ಆಪಲ್ ಮ್ಯೂಸಿಕ್, ಅಮೆಜಾನ್ ಮ್ಯೂಸಿಕ್, ವಿಂಕ್ ಮತ್ತು ಇತರ ಮ್ಯೂಸಿಕ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿದೆ.
ಗೀತೆಯ ವಿಡಿಯೋ, ಬೆಂಗಳೂರು ವಿಮಾನ ನಿಲ್ದಾಣದಿಂದ ತಮ್ಮ ಪ್ರಯಾಣ ಪ್ರಾರಂಭಿಸುವ ಪ್ರಯಾಣಿಕರ ಮೂರು ಭಾವನಾತ್ಮಕ ಕಥೆಗಳನ್ನು ಒಳಗೊಂಡಿದೆ. ಪ್ರಯಾಣ ಪ್ರಾರಂಭಿಸುವ ಪೂರ್ವದಲ್ಲಿ ಪ್ರಯಾಣಿಕರು ತೋರುವ ಉತ್ಸಾಹ ಹಾಗೂ ನಿರೀಕ್ಷೆಯೊಂದಿಗೆ ವಿಮಾನ ನಿಲ್ದಾಣಕ್ಕೆ ಪ್ರವೇಶಿಸುವ ಭಾವನಾತ್ಮಕ ದೃಶ್ಯಾವಳಿಗಳಿವೆ. ಅತ್ಯಾಧುನಿಕ ಸೌಲಭ್ಯಗಳಿಂದ ಹಿಡಿದು, ಎಲ್ಲ ಪ್ರಯಾಣಿಕರಿಗೆ ಅನುಗುಣವಾಗಿ ಚಿಂತನಶೀಲ ಸೇವೆಗಳು, ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವುದು ಸೇರಿದಂತೆ, ವಿಮಾನ ನಿಲ್ದಾಣದ ಅನುಭವದ ಪ್ರತಿಯೊಂದು ಅಂಶಗಳನ್ನೂ ಪ್ರಯಾಣಿಕರ ಪ್ರಯಾಣವನ್ನು ಉನ್ನತೀಕರಿಸಲು ವಿನ್ಯಾಸಗೊಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ರಿಕಿ ಕೇಜ್, ''ಸಂಗೀತಗಾರನಾಗಿ ನನ್ನ ನಂಬಿಕೆ ಹಾಗೂ ಅನುಭವಗಳನ್ನು ಪ್ರತಿಬಿಂಬಿಸುವ ನಿಟ್ಟಿನಲ್ಲಿ ಸಂಗೀತ ಸಂಯೋಜನೆ ಮಾಡುತ್ತೇನೆಂದು ನಾನು ಸದಾ ನಂಬುತ್ತೇನೆ. ರಚಿಸುವ ಪ್ರತಿಯೊಂದು ಸಂಗೀತವೂ ನನ್ನ ಒಂದು ಭಾಗವೇ ಆಗಿದೆ. ನನ್ನ ಎರಡನೇ ಮನೆಯಾದ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕಾಗಿ ಗೀತೆಯನ್ನು ಸಂಯೋಜಿಸಿರುವುದು ಅನುಭವವನ್ನು ಇನ್ನಷ್ಟು ಹೆಚ್ಚಿಸಿದೆ. ಈ ವಿಮಾನ ನಿಲ್ದಾಣವು ಬೆಂಗಳೂರಿನ ಅತ್ಯುತ್ತಮ ನಗರವನ್ನಾಗಿ ಪ್ರತಿನಿಧಿಸುತ್ತದೆ. ಅಲ್ಲದೇ, ನಮ್ಮ ರಾಷ್ಟ್ರದ ಮನ್ನಣೆಯ ಸಂಕೇತವಾಗಿದೆ. ಗೀತೆಯು ನನಗೆ ಹಾಗೂ ನನ್ನ ಆತ್ಮೀಯ ಸ್ನೇಹಿತ ಲೋನಿ ಪಾರ್ಕ್‌ಗೆ ಹೆಮ್ಮೆಯ ವಿಚಾರ. ಅದು ವಿಮಾನ ನಿಲ್ದಾಣದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸುವುದಲ್ಲದೆ, ಪ್ರತಿ ಸಂದರ್ಭದಲ್ಲೂ ವಿಮಾನ ನಿಲ್ದಾಣದ ಸಾಂಸ್ಕೃತಿಕ ಮಹತ್ವವನ್ನು ಸದಾ ಹಚ್ಚಹಸಿರಿನಂತೆ ಉಳಿಸಿಕೊಳ್ಳಲಿದೆ'' ಎಂದರು.
ವಿಮಾನ ನಿಲ್ದಾಣದ ಗೀತೆಯು ಸಂಗೀತ ಮತ್ತು ನಮ್ಮ ಸಂಸ್ಕೃತಿಯ ಮೂಲಕ ಪ್ರಯಾಣಿಕರ ಅನುಭವವನ್ನು ಉತ್ಕೃಷ್ಟಗೊಳಿಸಲಿದೆ. ಜಾಗತಿಕವಾಗಿ ಮೆಚ್ಚುಗೆ ಪಡೆದ ಕಲಾವಿದರೊಂದಿಗೆ ತೊಡಗಿಸಿಕೊಳ್ಳುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣವು ಭಾರತಕ್ಕೆ ಹೊಸ ಗೇಟ್‌ವೇ ಎಂಬ ಖ್ಯಾತಿಯನ್ನು ಬಲಪಡಿಸುತ್ತದೆ. ಈ ಗೀತೆಯು ಕೇವಲ ಹಾಡಷ್ಟೇ ಅಲ್ಲದೆ, ತನ್ನ ಗೇಟ್‌ಗಳ ಮೂಲಕ ಹಾದುಹೋಗುವ ಲಕ್ಷಾಂತರ ಪ್ರಯಾಣಿಕರ ವೈವಿಧ್ಯಮಯ ಕಥೆ, ಭಾವನೆ ಮತ್ತು ಅನುಭವಗಳ ಪ್ರತಿನಿಧಿಯಾಗಿರಲಿದೆ.
ಇದನ್ನೂ ಓದಿ:ಪ್ರಯಾಣಿಕರೇ ಗಮನಿಸಿ: ಈ ದಿನಗಳಂದು ನೈರುತ್ಯ ರೈಲ್ವೆಯಿಂದ ವಿಶೇಷ ರೈಲು ಸೇವೆ ಇರಲಿದೆ - Special Train