ದರ್ಶನ್ ಭೇಟಿ ಬಳಿಕ ನಟ ವಿನೋದ್ ಪ್ರಭಾಕರ್ ಭಾವುಕ ಮಾತು (ETV Bharat) ಬೆಂಗಳೂರು:ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪ ಪ್ರಕರಣದಲ್ಲಿ ಪರಪ್ಪನ ಅಗ್ರಹಾರಜೈಲು ಸೇರಿರುವ ನಟ ದರ್ಶನ್ ಅವರನ್ನು ಸ್ನೇಹಿತ ವಿನೋದ್ ಪ್ರಭಾಕರ್ ಇಂದು ಭೇಟಿ ಮಾಡಿದರು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರು.
ವಿನೋದ್ ಪ್ರಭಾಕರ್ ಹೇಳಿಕೆ: "ಮೊದಲನೆಯದಾಗಿ ರೇಣುಕಾಸ್ವಾಮಿ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬಕ್ಕೆ ಈ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ. ನಾನು ದರ್ಶನ್ ಅವರನ್ನು ಮೀಟ್ ಮಾಡಿದ್ದು ಕೊನೆಯದಾಗಿ ಒಂದು ಪಾರ್ಟಿಯಲ್ಲಿ. ಅದಾದ ನಂತರ ನ್ಯೂಸ್ ಚಾನಲ್ ನೋಡಿದಾಗಲೇ ಘಟನೆ ಬಗ್ಗೆ ಗೊತ್ತಾಗಿದ್ದು. ಜೈಲಿನಲ್ಲಿ ಈಗ ಭೇಟಿಯಾದಾಗ ದರ್ಶನ್ ಅವರ ಬಳಿ ನಾನು ಏನು ಮಾತಾಡಲಿಲ್ಲ. ಕೇವಲ ಒಳ ಹೋದ ತಕ್ಷಣ ಅವರನ್ನು ನೋಡಿ ಬಾಸ್ ಎಂದೆ, ಒಂದೇ ಸೆಕೆಂಡ್ ಶೇಕ್ ಹ್ಯಾಂಡ್ ಮಾಡಿ ಬಂದೆ. ಅವರು ಮೌನವಾಗಿದ್ದರು, ನಾನು ಸಹ ಏನು ಮಾತಾಡಿಲ್ಲ. ಟೈಗರ್ ಅಂದಾಗ ಬಾಸ್ ಅಂದೆ ಬೇರೇನು ಮಾತಾಡಿಲ್ಲ, ನಾನು ವಾಪಸ್ ಬಂದೆ".
"ಇನ್ನು ನನ್ನ ಬಗ್ಗೆ ಸಾಕಷ್ಟು ಕಡೆ ಈ ಘಟನೆ ಬಗ್ಗೆ ಪೋಸ್ಟ್ ಸಹ ಹಾಕಿಲ್ಲ. ಎಲ್ಲಿಯೂ ಕೂಡ ಪ್ರತಿಕ್ರಿಯೆ ಕೊಟ್ಟಿಲ್ಲವೆಂಬ ಕಾಮೆಂಟ್, ಸುದ್ದಿಗಳನ್ನು ನೋಡಿದ್ದೇನೆ. ನಾನು ಪೋಸ್ಟ್ ಹಾಕಿ ಸಮಸ್ಯೆ ಬಗೆ ಹರಿಯುತ್ತದೆ ಅಂದರೆ 1 ಲಕ್ಷ ಪೋಸ್ಟ್ ಬೇಕಾದರು ಹಾಕುತ್ತಿದ್ದೆ. ಆದರೆ ಪ್ರಕರಣ ಗಂಭೀರವಾಗಿದೆ. ಪೊಲೀಸರಿಂದ ತನಿಖೆ ನಡೆಯುತ್ತಿದೆ. ಘಟನೆಯ ಪೂರ್ಣ ವಿಚಾರ ತಿಳಿಯದೆ ಮಾತನಾಡಬಾರದೆಂದು ಸುಮ್ಮನಿದ್ದೆ. ರೇಣುಕಾಸ್ವಾಮಿ ಕುಟುಂಬ, ದರ್ಶನ್ ಕುಟುಂಬಕ್ಕೆ ಎಷ್ಟು ದುಃಖವಿದೆಯೋ ಅದಕ್ಕಿಂತ ಡಬಲ್ ನಮಗೂ ಬೇಜಾರಿದೆ. ತನಿಖೆ ನಡೆಯುತ್ತಿದ್ದು, ನಾವು ಸಹ ಏನು ಹೆಚ್ಚಾಗಿ ಮಾತನಾಡಲು ಸಾಧ್ಯವಿಲ್ಲ. ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ನನ್ನ ತಂದೆ ಹೇಳುತ್ತಿದ್ದರು. ಎಲ್ಲರಿಗೂ ಸಹ ಒಳ್ಳೆಯದಾಗಲಿ ಎಂದು ದೇವರನ್ನು ಕೇಳಿಕೊಳ್ಳುತ್ತೇನೆ" ಎಂದರು.
''ಕಾನೂನಿಗಿಂತ ಯಾರೂ ದೊಡ್ಡವರಿಲ್ಲ. ಎಲ್ಲರಿಗೂ ಒಳ್ಳೆಯದಾಗಲಿ ಎಂದು ಇವತ್ತು ಕೂಡ ನಾನು ದೇವರಲ್ಲಿ ಬೇಡಿಕೊಂಡು ಬಂದೆ. ನಾನು ದರ್ಶನ್ ಅವರನ್ನು ಭೇಟಿಯಾಗಿ ಸುಮಾರು ನಾಲ್ಕು ತಿಂಗಳು ಆಗಿರಬೇಕು. ಮಾಧ್ಯಮದಲ್ಲಿ ತೋರಿಸಿದಂತೆ ರೇಣುಕಾಸ್ವಾಮಿ ಕುಟುಂಬ ಸಹ ಕಣ್ಣೀರಲ್ಲಿ ಕೈತೊಳೆಯುತ್ತಿದೆ. ಮತ್ತೊಂದೆಡೆ ದರ್ಶನ್ ಸರ್ ಅವರ ಫ್ಯಾಮಿಲಿ, ಎಲ್ಲಾ ಅಭಿಮಾನಿಗಳಿಗೂ ನೋವಿದೆ. ನಮಗೂ ಅಷ್ಟೇ ಬೇಜಾರಿದೆ. ಇಂದು ಪೊಲೀಸರು ನೀಡಿರುವ ಪ್ರೊಟೊಕಾಲ್ ಪ್ರಕಾರ ಅವರನ್ನು ಕೆಲ ಕ್ಷಣಗಳವರೆಗೆ ಮಾತ್ರ ಭೇಟಿ ಆಗಿ ಜೈಲಿನಿಂದ ಹೊರಗೆ ಬಂದೆ'' ಎಂದು ವಿನೋದ್ ಪ್ರಭಾಕರ್ ತಿಳಿಸಿದರು.
ಇದನ್ನೂ ಓದಿ:ಪರಪ್ಪನ ಅಗ್ರಹಾರದ ಬಳಿ ಬಂದ ದರ್ಶನ್ ಅಭಿಮಾನಿಗಳು; ಬಾಸ್ ನೋಡಿಯೇ ಹೋಗೋದಾಗಿ ಪಣ - ACTOR DARSHAN FANS