ಕರ್ನಾಟಕ

karnataka

ETV Bharat / state

ಯಲಾಕುನ್ನಿ ಚಿತ್ರ ಅ.25 ರಂದು ಬಿಡುಗಡೆ: ನಟ ಕೋಮಲ್ - YELA KUNNI FILM

ಕೋಮಲ್ ನಟನೆಯ ಯಲಾಕುನ್ನಿ ಚಿತ್ರವು ಇದೇ ಅಕ್ಟೋಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಟ ಕೋಮಲ್
ನಟ ಕೋಮಲ್ (ETV Bharat)

By ETV Bharat Karnataka Team

Published : Oct 19, 2024, 4:53 PM IST

ಹುಬ್ಬಳ್ಳಿ:ಸೌಂದರ್ಯ ಸಿನಿ ಕಂಬೈನ್ಸ್ ಹಾಗೂ ನರಸಿಂಹ ಸಿನಿಮಾಸ್ ಲಾಂಛನದಲ್ಲಿ ಅನುಸೂಯ ಕೋಮಲ್ ಕುಮಾರ್, ಸಹನ ಮೂರ್ತಿ ಅವರು ನಿರ್ಮಿಸಿರುವ "ಯಲಾಕುನ್ನಿ" ಚಲನಚಿತ್ರ ಅಕ್ಟೋಬರ್ 25 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ನಟ ಕೋಮಲ್ ಕುಮಾರ್ ಹೇಳಿದರು.

ನಗರದಲ್ಲಿಂದು ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಸುಮಾರು 200ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ತೆರೆ ಕಾಣಲಿದ್ದು, ಹಳ್ಳಿ ಸೊಗಡಿನ ಚಿತ್ರ ಇದಾಗಿದೆ. ಹಳ್ಳಿ ಸೊಗಡಿನ ರಾಜಕೀಯ, ದೇವಸ್ಥಾನದ ಸುತ್ತ ನಡೆಯುವ ಕಥೆ ಇದು. ಮಂಡ್ಯ ನೇಟಿವಿಟಿ ಸಿನಿಮಾ. ಯಲಾಕುನ್ನಿ ವಜ್ರಮುನಿ ಅವರು ಯಾವಾಗಲೂ ಬಳಸುತ್ತಿದ್ದ ಪದ. ಅವರಿಗೆ ಗೌರವಾರ್ಪಣೆ ಮಾಡಲು ನಮ್ಮ ಚಿತ್ರಕ್ಕೆ ಆ ಶೀರ್ಷಿಕೆ ಇಟ್ಟು, ನಾನೇ ನಿರ್ಮಾಣ ಕೂಡ ಮಾಡಿದ್ದೇನೆ ಎಂದರು.

ಯಲಾಕುನ್ನಿ ಚಿತ್ರ ಅ.25 ರಂದು ಬಿಡುಗಡೆ: ನಟ ಕೋಮಲ್ (ETV Bharat)

ಯಲಾಕುನ್ನಿ ನಮ್ಮ ಬ್ಯಾನರ್​​ನ 9ನೇ ಚಿತ್ರ. ಈಗ ಏನಾದರೂ ವಿಶೇಷವಾಗಿ ಮಾಡಿದರೆ ಮಾತ್ರ ಜನ ಥೇಟರ್​ಗೆ ಬರೋದು. ಚಿತ್ರದಲ್ಲಿ‌ ಯುಐ ಟೆಕ್ನಾಲಜಿ ಬಳಸಿಕೊಳ್ಳಲಾಗಿದೆ. ಈಗಾಗಲೇ ಚಿತ್ರದ 2 ಹಾಡುಗಳು, ಟೀಸರ್ ಹಿಟ್ ಆಗಿದೆ. ನಾನು ನೋಡಿದ ಹಾಗೆ ಮೊದಲಿಂದಲೂ ಈ ಭಾಗದ ಜನ ಕನ್ನಡ ಸಿನಿಮಾಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಲೇ ಬಂದಿದ್ದಾರೆ. ಹಾಗಾಗಿ ನಾನು ನಿಮ್ಮ ಬಳಿ ಬಂದಿದ್ದೇನೆ. ಒಂದೇ ಥರದ ಪಾತ್ರ ಮಾಡಬಾರದು ಅಂತ ಇದರಲ್ಲಿ ಬೇರೆಯದೇ ಕ್ಯಾರೆಕ್ಟರ್ ಮಾಡಿದ್ದೇನೆ. ಮಂಡ್ಯ ಭಾಗದ ಹಳ್ಳಿಯಲ್ಲಿ ನಡೆಯೋ ಕಥೆಯಿದು, ಶ್ರೀರಂಗಪಟ್ಟಣದ ಸುತ್ತ ಮುತ್ತ ಶೂಟಿಂಗ್ ಮಾಡಿದ್ದೇವೆ. ಈಗಾಗಲೇ ಹಿಂದಿ ಡಬ್ಬಿಂಗ್ ರೈಟ್ಸ್ ಸೇಲ್ ಆಗಿದೆ ಎಂದು ತಿಳಿಸಿದರು.

ಆರಂಭದಲ್ಲಿ 45ಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದ್ದೇನೆ. ಹುಬ್ಬಳ್ಳಿಯಲ್ಲೇ ನಮ್ಮ ಆಫೀಸ್ ಕೂಡ ಇತ್ತು. ಅಣ್ಣನ ಸಲಹೆಯಂತೆ 5 ವರ್ಷ ಚಿತ್ರರಂಗದಿಂದ ದೂರ ಇದ್ದೆ. ತಮಿಳಲ್ಲೂ ಒಂದು ಸಿನಿಮಾ ಮಾಡಿದ್ದೇನೆ. ಅಲ್ಲಿಂದ ಆಫರ್ ಬರ್ತಿದೆ. ಆದರೆ ನನಗೆ ಕನ್ನಡದಲ್ಲೇ ಇರಬೇಕೆಂಬ ಆಸೆಯಿದೆ. ಧರ್ಮ ವಜ್ರಮುನಿ ಅವರ ಮೊಮ್ಮಗ ಆಕರ್ಷ್ ಕೂಡ ಈ ಚಿತ್ರದಲ್ಲಿ ನನ್ನ ಬಾಲ್ಯದ ಪಾತ್ರ ಮಾಡಿದ್ದಾನೆ. ನನ್ನ ಅಣ್ಣನ ಮಗ ಯತಿರಾಜ್, ಜಯಸಿಂಹ ಮುಸುರಿ, ಮಯೂರ್ ಪಟೇಲ್, ಸಾಧುಕೋಕಿಲ, ದತ್ತಣ್ಣಾ, ಮಿತ್ರ, ತಬಲಾ ನಾಣಿ ಸೇರಿದಂತೆ ಮೊದಲಾದವರು ಅಭಿನಯಿಸಿದ್ದಾರೆ.

ಧರ್ಮವಿಶ್ ಸಂಗೀತ ಸಂಯೋಜಿಸಿರುವ ನಾಲ್ಕು ಹಾಡುಗಳು ಈಗಾಗಲೇ ಎಲ್ಲರ ಮನ ಗೆದ್ದಿವೆ. ಇನ್ನು ಎನ್.ಆರ್ ಪ್ರದೀಪ್ ಕಥೆ, ಚಿತ್ರಕಥೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿರುವ ಚಿತ್ರ ಇದಾಗಿದೆ ಎಂದು ನಟ ಕೋಮಲ್ ಮಾಹಿತಿ ನೀಡಿದರು.

ಇದನ್ನೂ ಓದಿ:ಗುಳಿಗ ಕೊರಗಜ್ಜನ ಆದಿಸ್ಥಳಕ್ಕೆ ದುನಿಯಾ ವಿಜಯ್ ಭೇಟಿ: ಮುಂದಿನ ಚಿತ್ರದ ಬಗ್ಗೆ ಹೊಸ ಅಪ್​ಡೇಟ್​

ABOUT THE AUTHOR

...view details