ಕರ್ನಾಟಕ

karnataka

ETV Bharat / state

ರೇಣುಕಾಸ್ವಾಮಿ ಕೊಲೆ ಪ್ರಕರಣ: ಚಾರ್ಜ್​ಶೀಟ್​ನಲ್ಲಿನ ಹಲವು ಅಂಶಗಳ ಬಗ್ಗೆ ಪ್ರಶ್ನೆ ಎತ್ತಿದ ದರ್ಶನ್ ಪರ ವಕೀಲರು - Actor Darashna Bail Plea - ACTOR DARASHNA BAIL PLEA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮಂಗಳವಾರಕ್ಕೆ ಮುಂದೂಡಿಕೆಯಾಗಿದೆ.

ದರ್ಶನ್
ದರ್ಶನ್ (ETV Bharat)

By ETV Bharat Karnataka Team

Published : Oct 5, 2024, 5:52 PM IST

ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ ಅವರ ಜಾಮೀನು ಅರ್ಜಿ ಮತ್ತೆ ಮುಂದೂಡಿಕೆಯಾಗಿದೆ. ಚಾರ್ಜ್ ಶೀಟ್​​ನಲ್ಲಿ ಉಲ್ಲೇಖಿಸಿದ ಅಂಶಗಳಲ್ಲಿ ಹಲವು ನ್ಯೂನ್ಯತೆಗಳಿವೆ ಎಂದು ಆರೋಪಿ ದರ್ಶನ್ ಪರ ಹಿರಿಯ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿದರು. ಸಮಯ ಕೊರತೆ ಹಿನ್ನೆಲೆಯಲ್ಲಿ ಅರ್ಜಿ ವಿಚಾರಣೆಯನ್ನು ಆ.8ಕ್ಕೆ 57ನೇ ಸಿಸಿಹೆಚ್ ನ್ಯಾಯಾಲಯವು ಮುಂದೂಡಿತು.

ಪ್ರಕರಣದ ಎರಡನೇ ಆರೋಪಿಯಾಗಿರುವ ನಟ ದರ್ಶನ್ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ವಿ.ನಾಗೇಶ್ ಪೊಲೀಸರ ತನಿಖೆಯ ಲೋಪದೋಷಗಳನ್ನ ನ್ಯಾಯಾಲಯದ ಮುಂದಿಟ್ಟಿದ್ದಾರೆ. ರೇಣುಕಾಸ್ವಾಮಿಯ ಮೃತದೇಹ ಜೂನ್ 9ರಂದು ಪತ್ತೆಯಾಗಿರುವುದಾಗಿ ಅಪಾರ್ಟ್‌ಮೆಂಟ್‌ನ ಸೆಕ್ಯುರಿಟಿ ನೀಡಿರುವ ದೂರಿನಲ್ಲಿ ಸ್ಪಷ್ಟವಾಗಿದೆ. ಆದರೆ ಪೊಲೀಸರು ಜೂನ್ 11ರಂದು ಮಧ್ಯಾಹ್ನ 2:45ರ ಸುಮಾರಿಗೆ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಿದ್ದಾರೆ. ಮೃತನ ವಿವರ ಲಭ್ಯವಾಗಿರದಿದ್ದರಿಂದ ಮರಣೋತ್ತರ ಪರೀಕ್ಷೆ ವಿಳಂಬವಾಗಿದೆ ಎಂದು ಪೊಲೀಸರು ಕಾರಣ ನೀಡಿದ್ದಾರೆ. ಆದರೆ ಯಾವುದೇ ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಲು ಮೃತನ ವಿವರ ಲಭ್ಯವಿರಬೇಕು ಎಂದಿಲ್ಲವೆಂದು ಸಿಆರ್​ಪಿಸಿ 174 ಸ್ಪಷ್ಟವಾಗಿ ಹೇಳಿದೆ. ಹಾಗಾದರೆ ಪೊಲೀಸರು ಮೃತದೇಹದ ಮರಣೋತ್ತರ ಪರೀಕ್ಷೆ ಮಾಡಿಸಲು ವಿಳಂಬ ಮಾಡಿರುವುದೇಕೆ ಎಂದು ನ್ಯಾಯಾಲಯದ ಮುಂದೆ ವಾದ ಮಂಡಿಸಿದರು.

ಅಲ್ಲದೆ ಜೂನ್ 18ರಂದು ದರ್ಶನ್ ಅವರ ಮನೆಯಲ್ಲಿ 37.5 ಲಕ್ಷ ರೂ. ಹಣವನ್ನ ಜಪ್ತಿ ಮಾಡಿರುವ ಪೊಲೀಸರು, ಪ್ರಕರಣದ ಇತರೆ ಆರೋಪಿಗಳಿಗೆ ನೀಡಲು ಹಣ ಸಂಗ್ರಹಿಸಿಟ್ಟಿರುವುದಾಗಿ ಹೇಳಿಕೆ ಪಡೆದಿರುವುದಾಗಿ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಆದರೆ ಮೋಹನ್ ರಾಜ್ ಎಂಬುವರು ತಮ್ಮ ಮಗಳ ಆಲ್ಬಂ ಸಾಂಗ್ ಮಾಡಿಸಲು ದರ್ಶನ್ ಅವರಿಂದ ಫೆಬ್ರವರಿಯಲ್ಲಿ ಹಣ ಪಡೆದಿದ್ದರು. ಆ ಸಾಲದ ಹಣವನ್ನ ಮೇ 2ರಂದೇ ವಾಪಸ್ ನೀಡಿದ್ದಾರೆ. ಹಾಗಾದರೆ ದರ್ಶನ್ ಅವರು ಸಾಕ್ಷಿಗಳಿಗೆ ಕೊಡಲೆಂದೇ ಹಣ ಸಂಗ್ರಹಿಸಿಟ್ಟಿದ್ದರು ಎನ್ನಲು ಹೇಗೆ ಸಾಧ್ಯ?. ಮುಂದೆ ರೇಣುಕಾಸ್ವಾಮಿ ಎಂಬ ವ್ಯಕ್ತಿ ಬರಲಿದ್ದಾನೆ ಅವನ ಹತ್ಯೆಯಾಗಲಿದೆ, ಅದನ್ನ ಮುಚ್ಚಿಹಾಕಲು ಸಾಕ್ಷಿಗಳಿಗೆ ಹಣ ನೀಡಬೇಕಾಗುತ್ತದೆ ಎಂದು ದರ್ಶನ್ ಊಹಿಸಿರಲು ಸಾಧ್ಯವೇ ಎಂದು ತನಿಖಾಧಿಕಾರಿಗಳ ಕಾರ್ಯವೈಖರಿಯ ಕುರಿತು ವಕೀಲರು ಪ್ರಶ್ನೆ ಎತ್ತಿದ್ದಾರೆ.

ಜೂನ್ 18 ಹಾಗೂ 19ರಂದು ಎರಡೆರಡು ಸ್ವಇಚ್ಛಾ ಹೇಳಿಕೆಗಳನ್ನ ಪಡೆದುಕೊಳ್ಳಲಾಗಿದೆ. ಆದರೆ ಎರಡೂ ಸ್ವಇಚ್ಛಾ ಹೇಳಿಕೆಗಳಲ್ಲಿ ಕೆಲ ಅಂಶಗಳು ವ್ಯತಿರಿಕ್ತವಾಗಿವೆ. ಪೊಲೀಸರಿಗೆ ಮಿಡ್ ನೈಟ್ ಹೇಳಿಕೆ ದಾಖಲಿಸುವ ಅಭ್ಯಾಸವಿದೆ. ಮಲಗುವಾಗ ಓದಬಹುದಾದ ಅರೇಬಿಯನ್ ನೈಟ್ಸ್ ರೀತಿ ಕಥೆಯಿದೆ. ಸಾಕ್ಷಿದಾರರಾಗಿ ನಟ ಚಿಕ್ಕಣ್ಣ ಹಾಗೂ ನವೀನ್ ಅವರು ಪೊಲೀಸರ ಮುಂದಿನ ಹೇಳಿಕೆ ಹಾಗೂ ನ್ಯಾಯಾಲಯದ ಮುಂದಿನ ಹೇಳಿಕೆಗಳು ವ್ಯತಿರಿಕ್ತವಾಗಿವೆ. ಶೂ ನಲ್ಲಿ ರಕ್ತದ ಗುರುತಿದೆ. ಆದರೆ ಯಾವ ಶೂ ಎಂದು ನಿಖರವಾಗಿ ತಿಳಿಸಿಲ್ಲ. ಎಫ್ಎಸ್ಎಲ್​​ನಲ್ಲಿ ಇರದ ರಕ್ತದ ಗುರುತು ಚಾರ್ಜ್ ಶೀಟ್​​ನಲ್ಲಿ ಹೇಗೆ ಬಂತು? ಎಂದು ದರ್ಶನ್ ಪರ ವಕೀಲರು ಪ್ರಶ್ನಿಸಿದರು.

ರಿಮ್ಯಾಂಡ್ ಅರ್ಜಿಯಲ್ಲಿ ಕೆಲ ಸಾಕ್ಷಿಗಳ ಹೆಸರಿಲ್ಲ. ಕರೆ ವಿವರ ಆಧಾರದ ಮೇರೆಗೆ ಒಳಸಂಚು ಎಂದು ಬಿಂಬಿಸಲಾಗಿದೆ. ಆದರೆ ಪವಿತ್ರಾ ಹಾಗೂ ದರ್ಶನ್ ಇಬ್ಬರು ಸ್ನೇಹಿತರಾಗಿದ್ದು ಜನವರಿ 1ರಿಂದ ಜೂನ್ 9ವರೆಗೆ 342 ಬಾರಿ ಮಾಡಿದ್ದಾರೆ. ರೇಣುಕಾಸ್ವಾಮಿ ಹತ್ಯೆಯಾದ ಬಳಿಕ ಕರೆ ಅಧಾರದ ಮೇರೆಗೆ ಸಂಚು ಎಂದು ರೂಪಿಸಿರುವುದು ಯಾವ ಆಧಾರದ ಮೇಲೆ?. ಅಲ್ಲದೆ, ರೆಸ್ಟೋರೆಂಟ್​​ನಲ್ಲಿ ಒಟ್ಟಾಗಿ ಕುಳಿತು ಊಟಕ್ಕೆ ಸೇರಿದರೆ ಸಂಚು ಅಂತಾ ಭಾವಿಸಿಬಹುದಾ ಎಂದು ಪ್ರಶ್ನಿಸಿದ ವಕೀಲರು, ಇವೆಲ್ಲವೂ ಚಾರ್ಜ್ ಶೀಟ್ ಆಫ್​ ಗ್ರೇಟ್ ಡ್ರಾಮಾ ಎಂದು ವಾದಿಸಿದರು.

ಇದನ್ನೂ ಓದಿ:ರೀ ರಿಲೀಸ್​ನಲ್ಲೂ ಒಳ್ಳೆ ಗಳಿಕೆ ಮಾಡಿದ ಉಪೇಂದ್ರ, ಜಾಕಿ, ರಾಬರ್ಟ್, ಕರಿಯ, ಎ ಸಿನಿಮಾಗಳು - Re Released Movies collection

ABOUT THE AUTHOR

...view details