ಬೆಂಗಳೂರು:ಗನ್ ಲೈಸೆನ್ಸ್ ರದ್ದು ಮಾಡುವುದಾಗಿ ಪೊಲೀಸ್ ಇಲಾಖೆ ನೀಡಿದ್ದ ನೋಟಿಸ್ಗೆ ನಟ ದರ್ಶನ್ ಉತ್ತರ ನೀಡಿದ್ದಾರೆ. ಪಿಸ್ತೂಲ್ನ ಪರವಾನಗಿ ರದ್ದು ಮಾಡದಂತೆ ಅದರಲ್ಲಿ ಮನವಿ ಮಾಡಿದ್ದಾಗಿ ತಿಳಿದುಬಂದಿದೆ.
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿತರಾಗಿರುವ ನಟ ದರ್ಶನ್ ಜಾಮೀನು ಪಡೆದು ಸದ್ಯ ಹೊರಗಿದ್ದಾರೆ. ನಟ ಪಡೆದಿರುವ ಗನ್ ಅನ್ನು ರದ್ದುಪಡಿಸುವ ಸಂಬಂಧ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿತ್ತು. ನಗರ ಪೊಲೀಸ್ ಆಡಳಿತ ವಿಭಾಗದ ಡಿಸಿಪಿ ಅವರಿಗೆ ತಮಗೆ ನೀಡಲಾದ ಗನ್ ಲೈಸೆನ್ಸ್ ರದ್ದುಪಡಿಸದಂತೆ ದರ್ಶನ್ ಕೋರಿದ್ದಾರೆ.
ರೇಣುಕಾಸ್ವಾಮಿ ಹತ್ಯೆ ಕೇಸ್ನಲ್ಲಿ ಯಾವುದೇ ಷರತ್ತುಗಳನ್ನು ಉಲ್ಲಂಘಿಸಿಲ್ಲ. ಕಾನೂನಾತ್ಮಕವಾಗಿ ಜಾಮೀನು ಪಡೆದುಕೊಂಡಿದ್ದೇನೆ. ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನೂ ಪಾಲನೆ ಮಾಡುತ್ತಿದ್ದೇನೆ. ಬೆಂಗಳೂರಿನಿಂದ ಹೊರಗೆ ಹೋಗುವ ಮುನ್ನ ಕೋರ್ಟ್ ಅನುಮತಿ ಸಹ ಪಡೆದಿದ್ದೇನೆ. ಹೀಗಾಗಿ, ತಾವು ಪಡೆದ ಬಂದೂಕಿನ ಪರವಾನಗಿ ರದ್ದುಪಡಿಸುವ ಅಗತ್ಯ ಇಲ್ಲ ಎಂದು ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.