ಬೆಂಗಳೂರು: ನಟ ಡಾಲಿ ಧನಂಜಯ್ ಮತ್ತು ಡಾ. ಧನ್ಯತಾ ಅವರ ನಿಶ್ಚಿತಾರ್ಥ ಕೆಲ ವಾರಗಳ ಹಿಂದೆಯಷ್ಟೇ ನೆರವೇರಿತ್ತು. ಫೆಬ್ರವರಿ 16ರಂದು ಬಾಳ ಬಂಧನಕ್ಕೆ ಕಾಲಿಡಲಿರುವ ಜೋಡಿ, ಇಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮದುವೆಯ ಮೊದಲ ಆಮಂತ್ರಣ ಪತ್ರಿಕೆಯನ್ನು ನೀಡಿ, ಮದುವೆಗೆ ಆಹ್ವಾನಿಸಿದೆ.
ಕೈಬರಹದ ಆಮಂತ್ರಣ ಪತ್ರ: 'ನಿಮ್ಮ ಪ್ರೀತಿಯ ಧನಂಜಯ ಹಾಗೂ ಧನ್ಯತಾ ಮಾಡುವ ನಮಸ್ಕಾರಗಳು. ನಾವು ಖುಷಿಯಾಗಿದ್ದೇವೆ. ನಮ್ಮ ವಿಷಯ ತಿಳಿದು ನೀವು ಸಂಭ್ರಮಿಸಿದ್ದು ನಮ್ಮ ಖುಷಿಯನ್ನು ಇಮ್ಮಡಿಗೊಳಿಸಿದೆ. ನಮ್ಮ ಮದುವೆ ಸಂಭ್ರಮವನ್ನು ನಿಮ್ಮೆಲ್ಲರ ಜೊತೆಗೂಡಿ ಆಚರಿಸಬೇಕು ಎಂಬ ಮಹದಾಸೆಯಿಂದ ಈ ಪತ್ರ ಬರೆಯುತ್ತಿದ್ದೇವೆ. ತಾವು ಎಲ್ಲಿದ್ದರೂ ಜಗದ ಯಾವುದೇ ಮೂಲೆಯಲ್ಲಿ ಇದ್ದರೂ ಕುಟುಂಬ ಸಮೇತರಾಗಿ ಬಂದು ನಮ್ಮ ಸಮಾಗಮಕ್ಕೆ ನೀವು ಆಶೀರ್ವದಿಸಬೇಕು. ಪ್ರೇಮದ ಭರವಸೆಯೇ ಬಾಳಿನ ಬೆಳಕು. ನಮ್ಮ ಪ್ರೀತಿದೀಪದ ಪ್ರಕಾಶಕ್ಕೆ ಸಾಕ್ಷಿಯಾಗಬೇಕು ಎಂಬುದು ನಮ್ಮ ಆಶಯ, ಮತ್ತೆಲ್ಲಾ ಕ್ಷೇಮವಷ್ಟೇ. ನಿಮ್ಮನ್ನು ಸ್ವಾಗತಿಸುವ ನಿರೀಕ್ಷೆಯಲ್ಲಿ ಧನಂಜಯ ಹಾಗೂ ಧನ್ಯತಾ' ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಯಲಾಗಿದೆ. ಈ ಬರಹ ಸಹ ಕೈಬರಹದ ಫಾಂಟ್ನಲ್ಲಿರುವುದು ವಿಶೇಷ.