ಕರ್ನಾಟಕ

karnataka

ETV Bharat / state

ಕೊಪ್ಪಳ ಲೋಕಸಭಾ ಚುನಾವಣೆ: ಕರಡಿ ಸಂಗಣ್ಣಗೆ ತಪ್ಪಿದ ಟಿಕೆಟ್​, ಬೆಂಬಲಿಗರ ಆಕ್ರೋಶ

ಕೊಪ್ಪಳದಲ್ಲಿ ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಲೋಕಸಭೆ ಚುನಾವಣೆಗೆ ಟಿಕೆಟ್​ ಸಿಗದಿರುವುದಕ್ಕೆ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಹೈಕಮಾಂಡ್​​ ವಿರುದ್ಧ ಘೋಷಣೆ ಕೂಗಿದರು.

By ETV Bharat Karnataka Team

Published : Mar 14, 2024, 8:49 AM IST

Updated : Mar 14, 2024, 1:25 PM IST

ಬಿಜೆಪಿ ಕಾರ್ಯಕರ್ತರ ಆಕ್ರೋಶ
ಬಿಜೆಪಿ ಕಾರ್ಯಕರ್ತರ ಆಕ್ರೋಶ

ಕರಡಿ ಸಂಗಣ್ಣ ಬೆಂಬಲಿಗರ ಆಕ್ರೋಶ

ಕೊಪ್ಪಳ: ಹಾಲಿ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್​​​ ತಪ್ಪಿದ್ದಕ್ಕೆ ಅವರ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿ ಬಿಜೆಪಿ ಹೈ ಕಮಾಂಡ್​​ ವಿರುದ್ಧ ಘೋಷಣೆ ಕೂಗಿದರಲ್ಲದೆ, ಜಿಲ್ಲಾ ಬಿಜೆಪಿಯ ವಿವಿಧ ಪದಾಧಿಕಾರಿಗಳು ತಮಗೆ ನೀಡಿರುವ ಹುದ್ದೆಗೆ ರಾಜೀನಾಮೆ ಕೊಡುವುದಾಗಿ ಹೇಳಿದ್ದಾರೆ.

‘ಆರ್​ಎಸ್​ಎಸ್​​ ಕುತಂತ್ರ ಮತ್ತು ಪಕ್ಷದ ಕೆಲ ನಾಯಕರ ಕುಮ್ಮಕ್ಕಿನಿಂದ ಸಂಗಣ್ಣ ಅವರಿಗೆ ಟಿಕೆಟ್ ಕೈ ತಪ್ಪಿದೆ. ಯಾರಿಗೂ ಗೊತ್ತೇ ಇಲ್ಲದ, ಪಕ್ಷಕ್ಕಾಗಿ ದುಡಿಯದ ವ್ಯಕ್ತಿಗೆ ಟಿಕೆಟ್‌ ನೀಡಿದ್ದು ಸರಿಯಲ್ಲ. ಕಾಂಗ್ರೆಸ್​ ಅಭ್ಯರ್ಥಿ ಗೆಲುವಿಗೆ ಅನುಕೂಲ ಮಾಡಿಕೊಡಲೆಂದು ನಮ್ಮವರೇ ಸಂಚು ರೂಪಿಸಿ ದುರ್ಬಲ ಅಭ್ಯರ್ಥಿಗೆ ಟಿಕೆಟ್ ಸಿಗುವಂತೆ ಮಾಡಿದ್ದಾರೆ. ಇದರಲ್ಲಿ ಆರ್​ಎಸ್​ಎಸ್​​ ನಾಯಕರ ಕೈವಾಡವಿದೆ’ ಎಂದು ಕರಡಿ ಸಂಗಣ್ಣ ಬೆಂಬಲಿಗರು ಆರೋಪಿಸಿದರು.

ಕಾರ್ಯಕರ್ತರು ಹಾಲಿ ಸಂಸದರ ಮುಂದೆಯೇ ಈ ಎಲ್ಲ ಹೇಳಿಕೆಗೆಳನ್ನು ನೀಡಿದ್ದು, ಅದಕ್ಕೆ ಅವರು ಪ್ರತಿಕ್ರಿಯೆ ನೀಡಿ 'ನಾನು ಪಕ್ಷದ ತೀರ್ಮಾನಕ್ಕೆ ಬದ್ಧನಾಗಿದ್ದೇನೆ. ಹೊಸಬರಿಗೆ ಅವಕಾಶ ಮಾಡಿಕೊಡುವ ಕಾರಣಕ್ಕೆ ಬಸವರಾಜ ಕ್ಯಾವಟರ್​ಗೆ ಟಿಕೆಟ್ ಕೊಟ್ಟಿರಬಹುದು. ಪಕ್ಷದ ನಿರ್ಧಾರವನ್ನು ಗೌರವಿಸುತ್ತೇನೆ. ಆದರೆ, ಬಿಜೆಪಿ ಕಾರ್ಯಕರ್ತರಿಗೆ ಸಾಕಷ್ಟು ನೋವಾಗಿದೆ’ ಎಂದು ಭಾವುಕರಾದರು.

ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಹೊಸ ಅಭ್ಯರ್ಥಿ:ಬಿಜೆಪಿ ಹೈಕಮಾಂಡ್​ ಕೊಪ್ಪಳ ಲೋಕಸಭಾ ಕ್ಷೇತ್ರಕ್ಕೆ ಹೊಸ ಮುಖ ಡಾ. ಬಸವರಾಜ ಕ್ಯಾವಟರ್ ಅವರಿಗೆ ಟಿಕೆಟ್ ಘೋಷಣೆ ಮಾಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಹಾಲಿ ಸಂಸದ ಸಂಗಣ್ಣ ಕರಡಿಗೆ ಶಾಕ್ ನೀಡಿದೆ. ಕಳೆದ ಎರಡು ಅವಧಿಗೆ ಸಂಸದ ಸಂಗಣ್ಣ ಕರಡಿ ಅವರಿಗೆ ಬಿಜೆಪಿ ಟಿಕೆಟ್ ನೀಡಿತ್ತು. ಈ ಬಾರಿಯೂ ಅವರು ಟಿಕೆಟ್ ನಿರೀಕ್ಷೆಯಲ್ಲಿದ್ದರು. ಹಾಲಿ ಸಂಸದರಿಗೆ ಟಿಕೆಟ್ ಕೈ ತಪ್ಪಲಿದೆ ಎನ್ನುವ ಸುದ್ದಿ ರಾಜಕೀಯ ವಲಯದಲ್ಲಿ ಹರಿದಾಡಿತ್ತು.

2019 ರಲ್ಲೇ ಡಾ.ಬಸವರಾಜ ಕ್ಯಾವಟರ್​ ಅವರು ಎಂಪಿ ಟಿಕೆಟ್‌ಗೆ ಪ್ರಯತ್ನ ನಡೆಸಿದ್ದರು. ಆಗ ಕೈ ತಪ್ಪಿತ್ತು. ಈ ಬಾರಿ ಅವರು ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಡಾ. ಬಸವರಾಜ ಹೊಸ ಮುಖವಾಗಿದ್ದರೂ ಸಹ ಅವರ ಕುಟುಂಬವು ರಾಜಕಾರಣದಲ್ಲಿದ್ದು, ಅವರ ತಂದೆ ಕೆ. ಶರಣಪ್ಪ ಅವರು ಜೆಡಿಎಸ್‌ನಿಂದ ಹಿಂದೊಮ್ಮೆ ಶಾಸಕರಾಗಿದ್ದರು. ಈಗ ಬಿಜೆಪಿಯಲ್ಲಿದ್ದಾರೆ.

ಕರಡಿ ಸಂಗಣ್ಣ ಹೇಳಿಕೆ

ಹಾಲಿ ಸಂಸದ ಸಂಗಣ್ಣ ಟಿಕೆಟ್ ಘೋಷಣೆ ಕುರಿತು ಹೇಳಿದ್ದೇನು?: ''ಹೈಕಮಾಂಡ್​ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. ನಾನು ಬಿಜೆಪಿಯಲ್ಲಿಯೇ ಇರುತ್ತೇನೆ. ನಾನು ಬೇರೆ ಪಕ್ಷಕ್ಕೆ ಹೋಗುವ ವಿಚಾರ ಮಾಡಿಲ್ಲ. ಘೋಷಿತ ಅಭ್ಯರ್ಥಿಗೆ ಅಭಿನಂದಿಸುತ್ತೇನೆ. ಬಸವರಾಜ ಅವರು ಯುವಕರಿದ್ದಾರೆ. ಅವರ ತಂದೆ ಮಾಜಿ ಶಾಸಕರು. ಬಸವರಾಜ ಅವರಿಗೆ ಯಾವ ಮಾನದಂಡದಲ್ಲಿ ಟಿಕೆಟ್ ನೀಡಿದ್ದಾರೆ, ಯಾವ ಮಾನದಂಡದಲ್ಲಿ ನನಗೆ ಟಿಕೆಟ್ ತಪ್ಪಿದೆ ಎಂಬುದು ಗೊತ್ತಿಲ್ಲ. ಕಳೆದ 10 ವರ್ಷ ಮೋದಿ ಅವರೊಂದಿಗೆ ಕೈಜೋಡಿಸಿ ಜನರ ಸೇವೆ ಮಾಡಿದ್ದೇನೆ. ನನಗೆ ಕೆಲಸ ಮಾಡಿದ ತೃಪ್ತಿ ಇದೆ. ನನಗೆ ಅಸಮಾದಾನವಿಲ್ಲ, ಆದರೆ ಕಾರ್ಯಕರ್ತರಿಗೆ ಇದೆ'' ಎಂದು ಟಿಕೆಟ್ ವಂಚಿತ ಸಂಗಣ್ಣ ಕರಡಿ ಹೇಳಿದರು.

ಇದನ್ನೂ ಓದಿ:ಬಿಜೆಪಿ ಪಟ್ಟಿ ವಿಶೇಷ: ಮಾಜಿ ಸಿಎಂಗೆ ಕೋಕ್! ಮತ್ತೊಬ್ಬ ಮಾಜಿ ಸಿಎಂಗೆ ಎಂಟ್ರಿ!!, ಇನ್ನೊಬ್ಬ ಮಾಜಿ ಸಿಎಂಗೆ ಸಸ್ಪೆನ್ಸ್!!!

Last Updated : Mar 14, 2024, 1:25 PM IST

ABOUT THE AUTHOR

...view details