ಮೈಸೂರು:ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಅಧಿಕಾರಿಗಳು ಸಿಎಂ ಸಿದ್ದರಾಮಯ್ಯ ಸೇರಿದಂತೆ ಇತರೆ ಆರೋಪಿಗಳಿಗೆ ತನಿಖಾ ವರದಿಯಲ್ಲಿ ಕ್ಲೀನ್ ಚಿಟ್ ನೀಡಿದ್ದು, ಈ ಸಂಬಂಧ ದೂರುದಾರ ಸ್ನೇಹಮಯಿ ಕೃಷ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತ ನೋಟಿಸ್ ಬಗ್ಗೆ ಪ್ರತಿಕ್ರಿಯಿಸಿ, "ಮುಡಾ 50:50 ಹಗರಣದಲ್ಲಿ ಸಾಕ್ಷ್ಯಾಧಾರಗಳ ಕೊರತೆಯಿಂದ "ಬಿ" ರಿಪೋರ್ಟ್ ಸಲ್ಲಿಸುತ್ತೇವೆ ಎಂದು ಮೈಸೂರು ಲೋಕಾಯುಕ್ತರು ನೋಟಿಸ್ ನೀಡಿದ್ದಾರೆ. ಈ ಬಗ್ಗೆ ಒಂದು ವಾರದಲ್ಲಿ ತಕರಾರು ಅರ್ಜಿ ಸಲ್ಲಿಸುತ್ತೇನೆ. ಸಾಕ್ಷ್ಯಾಧಾರಗಳನ್ನು ನೀಡಿ ಆರೋಪ ಸಾಬೀತು ಪಡಿಸುತ್ತೇನೆ" ಎಂದು ಹೇಳಿದರು.
ಸ್ನೇಹಮಯಿ ಕೃಷ್ಣ (ETV Bharat) "ಲೋಕಾಯುಕ್ತ ಅಧಿಕಾರಿಗಳ ಮೇಲೆ ಇದ್ದ ಅನುಮಾನ ಇಂದು ನಿಜವಾಗಿದೆ. ರಾಜಕೀಯ ಪ್ರಭಾವಕ್ಕೆ ಒಳಗಾಗಿ ಲೋಕಾಯುಕ್ತ ಅಧಿಕಾರಿಗಳು ಸಾಕ್ಷಿಗಳ ಕೊರತೆ ಎಂದು ನಾಲ್ಕು ಜನ ಆರೋಪಿಗಳಿಗೆ "ಬಿ" ರಿಪೋರ್ಟ್ ವರದಿ ಸಲ್ಲಿಸುತ್ತೇವೆ ಎಂದು ಲೋಕಾಯುಕ್ತ ಪೊಲೀಸರು ನನಗೆ ನೋಟಿಸ್ ನೀಡಿದ್ದಾರೆ. ಇದನ್ನು ರಾಜ್ಯದ ಜನತೆ ಪ್ರಶ್ನೆ ಮಾಡಬೇಕು. ಒಬ್ಬ ಐಪಿಎಸ್ ಅಧಿಕಾರಿ ಒದಗಿಸಿರುವ ಸಾಕ್ಷ್ಯಾಧಾರಗಳನ್ನು ವಿಶ್ಲೇಷಣೆ ಮಾಡಿ, ಮಾಹಿತಿ ನೀಡಲು ಸಾಧ್ಯವಿಲ್ಲ ಎಂದರೆ ಇದು ನಾಚೀಕೆಗೇಡಿನ ಸಂಗತಿ. 10ನೇ ತರಗತಿ ಓದಿರುವ ನಾನು ಒಬ್ಬ ಸಾಮಾನ್ಯ ವ್ಯಕ್ತಿ. ಈ ಆರೋಪವನ್ನು ಸಾಬೀತು ಮಾಡುತ್ತೇನೆ ಎಂದರು.
"ನಾನು ಒಂದು ಪ್ರಶ್ನೆ ಕೇಳುತ್ತೇನೆ, ಸಿಎಂ ಸಿದ್ದರಾಮಯ್ಯ ಅವರಿಗೆ ತಾಕತ್ತಿದ್ದರೆ, ತಮ್ಮ ಪತ್ನಿಗೆ 50:50 ಅನುಪಾತದಲ್ಲಿ ನಿವೇಶನ ನೀಡಬೇಕೆಂಬ ಅಧಿಸೂಚನೆ ಇದ್ದರೆ ಅದನ್ನು ತೋರಿಸಲಿ. ಕಾನೂನು ಬದ್ಧವಾಗಿ ನಿವೇಶನ ಪಡೆದಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ಸಾಬೀತು ಮಾಡಿದರೇ ನಾನು ಜೈಲಿಗೆ ಹೋಗಲು ಸಿದ್ಧನಿದ್ದೇನೆ" ಎಂದು ಹೇಳಿದರು.
ಆರೋಪಿಗಳನ್ನು ರಕ್ಷಿಸುವ ಕೆಲಸ ಲೋಕಾಯುಕ್ತ ಮಾಡುತ್ತಿದೆ :"ಸಾಕ್ಷಿಗಳ ಕೊರತೆಯಿಂದ "ಬಿ" ಅಂತಿಮ ವರದಿ ನೀಡುತ್ತಿದ್ದೇವೆ ಹಾಗೂ ಇದನ್ನು ನೀವು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡಬಹುದು ಎಂದು ಲೋಕಾಯುಕ್ತ ಅಧಿಕಾರಿಗಳು ಹೇಳಿದ್ದಾರೆ. ನ್ಯಾಯಾಲಯವು ಒಂದು ವಾರ ಸಮಯ ನೀಡಿದೆ. ನಾನು ಇದಕ್ಕೆ ತಕಾರಾರು ಅರ್ಜಿ ಸಲ್ಲಿಸಿ, ಭ್ರಷ್ಟ ಅಧಿಕಾರಿಗಳ ಬಗ್ಗೆ ಇಡೀ ರಾಜ್ಯದ ಜನತೆಗೆ ತಿಳಿಸುತ್ತೇನೆ. ತನಿಖೆ ಸಂಪೂರ್ಣವಾಗದೆ ಅಂತಿಮ ವರದಿ ಸಲ್ಲಿಸಲು ಹೇಗೆ ಸಾಧ್ಯ?. ಇದರಿಂದ ಗೊತ್ತಾಗುತ್ತದೆ ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಲೋಕಾಯುಕ್ತ ಮಾಡುತ್ತಿದೆ" ಎಂದು ದೂರಿದರು.
"ನಾನು ಸಾಕಷ್ಟು ದಾಖಲೆಗಳನ್ನು ನೀಡಿದ್ದೇನೆ, ತನಿಖಾ ಪ್ರಕ್ರಿಯೆ ಮುಗಿಯುವ ಮುನ್ನ ಅಂತಿಮ ವರದಿ ಸಲ್ಲಿಸಿದರೆ ಕಾನೂನು ಉಲ್ಲಂಘನೆಯಾಗುತ್ತದೆ. ನಾನು ಇದಕ್ಕೆ ತಕರಾರು ಅರ್ಜಿ ಸಲ್ಲಿಸಿ ಇದೇ ಲೋಕಾಯುಕ್ತ ಅಧಿಕಾರಿಗೆ ಛೀಮಾರಿ ಹಾಕಿಸುತ್ತೇನೆ" ಎಂದು ಹೇಳಿದರು.
ಇದನ್ನೂ ಓದಿ:ಮುಡಾ ಹಗರಣದಲ್ಲಿ ಸಾಕ್ಷ್ಯಾಧಾರ ಕೊರತೆ; ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿಗೆ ಕ್ಲೀನ್ ಚಿಟ್ ನೀಡಿದ ಲೋಕಾಯುಕ್ತ