ಗಂಗಾವತಿ (ಕೊಪ್ಪಳ):"ಝಿರೋ ಟ್ರಾಫಿಕ್ ಇದ್ದಾಗಲೂ ಶಿಷ್ಟಾಚಾರ ಮುರಿದು ರೋಡ್ ಡಿವೈಡರ್ ಹತ್ತಿಸಿ ಮುಖ್ಯಮಂತ್ರಿಗಳ ಭದ್ರತೆ, ಸುರಕ್ಷತೆಯ ಬೆಂಗಾವಲು ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಪ್ರಧಾನಮಂತ್ರಿ, ಮುಖ್ಯಮಂತ್ರಿಯಂತಹ ಉನ್ನತ ಹುದ್ದೆಯಲ್ಲಿರುವ ವ್ಯಕ್ತಿಗಳು ಸಂಚರಿಸುವ ಮಾರ್ಗದಲ್ಲಿ Z-ಶ್ರೇಣಿಯ ಭದ್ರತೆಯ ಉದ್ದೇಶಕ್ಕೆ ಝಿರೋ ಟ್ರಾಫಿಕ್ ಮಾಡಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ಹೇರಲಾಗುತ್ತದೆ. ಶನಿವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಗಾವತಿ ಮೂಲಕ ಕೊಪ್ಪಳಕ್ಕೆ ಹೋಗುವ ಸಂದರ್ಭದಲ್ಲಿ ಝಿರೋ ಟ್ರಾಫಿಕ್ ಮಾಡಲಾಗಿತ್ತು. ಆಗ ನಿಯಮ ಉಲ್ಲಂಘಿಸಿ ಶಾಸಕ ಜನಾರ್ದನರೆಡ್ಡಿ, ರೋಡ್ ಡಿವೈಡರ್ ಹತ್ತಿಸಿ ರಾಂಗ್ ರೂಟ್ನಲ್ಲಿ ಬೆಂಗಾವಲು ವಾಹನಕ್ಕೆ ಎದುರು ಬಂದಿರುವುದು ಕಾನೂನು ಬಾಹಿರ" ಎಂದು ಹೇಳಿದರು.