ಬೆಂಗಳೂರು:ರಕ್ಷಣಾ ಸಚಿವರ ಬೆಂಗಾವಲು ವಾಹನ ತೆರಳುವಾಗ ಇತರೆ ವಾಹನಗಳನ್ನು ನಿಯಂತ್ರಿಸುತ್ತಿದ್ದ ಟ್ರಾಫಿಕ್ ಹೆಡ್ ಕಾನ್ಸ್ಟೇಬಲ್ನತ್ತ ಸ್ಕೂಟರ್ ಚಲಾಯಿಸಿ ಗಾಯಗೊಳಿಸಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಅಸ್ಸೋಂ ಮೂಲದ ಅಹಮದ್ ದಿಲಾವರ್ ಹುಸೇನ್ (22) ಬಂಧಿತ ಆರೋಪಿ. ಫೆಬ್ರವರಿ 9ರಂದು ಸೆಂಟ್ರಲ್ ಸ್ಟ್ರೀಟ್‌ನ ಬಿಆರ್‌ವಿ ಜಂಕ್ಷನ್‌ನಿಂದ ಅನಿಲ್ ಕುಂಬ್ಳೆ ಸರ್ಕಲ್ ನಡುವಿನ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಾಜಿನಗರ ಸಂಚಾರ ಠಾಣೆಯ ಹೆಡ್ ಕಾನ್ಸ್ಟೇಬಲ್ ದಿನೇಶ್ ಅವರತ್ತ ಆರೋಪಿ ತನ್ನ ಸ್ಕೂಟರ್ ನುಗ್ಗಿಸಿದ್ದ.
ಫೆಬ್ರವರಿ 9ರಂದು ರಾಜಧಾನಿ ಬೆಂಗಳೂರಿನಲ್ಲಿದ್ದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ವಾಹನ ಮಧ್ಯಾಹ್ನ 1:50ರ ಸುಮಾರಿಗೆ ಸೆಂಟ್ರಲ್ ಸ್ಟ್ರೀಟ್‌ನಲ್ಲಿ ತೆರಳುತ್ತಿತ್ತು. ಈ ವೇಳೆ ಸಚಿವರ ಬೆಂಗಾವಲು ವಾಹನಕ್ಕೆ ದಾರಿಮಾಡಿಕೊಡಲು ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಬಿಆರ್‌ವಿ ಜಂಕ್ಷನ್‌ನತ್ತ ಬರುವ ವಾಹನಗಳನ್ನು ಹೆಡ್ ಕಾನ್ಸ್ಟೇಬಲ್ ದಿನೇಶ್ ನಿಯಂತ್ರಿಸುತ್ತಿದ್ದರು. ಆಗ ಸ್ನೇಹಿತನೊಂದಿಗೆ ಸ್ಕೂಟರ್‌ನಲ್ಲಿ ಬಂದಿದ್ದ ಆರೋಪಿ, ಸೂಚನೆಯನ್ನು ಮೀರಿ ದಿನೇಶ್ ಅವರತ್ತ ನುಗ್ಗಿದ್ದ. ಇದರಿಂದ ನೆಲಕ್ಕೆ ಬಿದ್ದಿದ್ದ ದಿನೇಶ್ ಅವರ ತಲೆ, ಬಲ ಕಿವಿ, ಕೈಕಾಲಿಗೆ ಗಾಯಗಳಾಗಿದ್ದವು. ಗಾಯಗೊಂಡಿದ್ದ ಹೆಡ್ ಕಾನ್ಸ್ಟೇಬಲ್ ದಿನೇಶ್ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು.