ಬೆಂಗಳೂರು:ಅತೀ ವೇಗಕ್ಕೆ ಕಡಿವಾಣ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸುವುದು ಸೇರಿದಂತೆ ಸಂಚಾರ ನಿಯಮಗಳ ಪಾಲನೆಗೆ ಹೆಚ್ಚು ಒತ್ತು ನೀಡಿದ ಫಲದಿಂದಾಗಿ ರಾಜ್ಯದಲ್ಲಿ ಸಂಭವಿಸಿದ ಅಪಘಾತ ಪ್ರಕರಣಗಳಲ್ಲಿನ ಸಾವಿನ ಸಂಖ್ಯೆ ಇಳಿಕೆಯಾಗಿದೆ. ಕಳೆದ ಮೂರು ತಿಂಗಳಲ್ಲಿ 2,682 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದಾರೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಸಂಖ್ಯೆ ಕಡಿಮೆಯಾಗಿರುವುದು ಕೊಂಚ ಆಶಾದಾಯಕವಾಗಿದೆ.
ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಸಂಭವಿಸುವ ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಅಧಿಕವಾಗುತ್ತಿರುವ ಮರಣ ಸಂಖ್ಯೆಯನ್ನು ಕಡಿಮೆಗೊಳಿಸಲು ರಸ್ತೆ ಹಾಗೂ ಸುರಕ್ಷತೆ ಇಲಾಖೆ ಕೈಗೊಂಡ ಸುಧಾರಣೆಗಳಿಂದ ಕಳೆದ ವರ್ಷಕ್ಕಿಂತ ಈ ಬಾರಿ ಅಪಘಾತದಲ್ಲಿ ಬಲಿಯಾಗುವವರ ಸಂಖ್ಯೆ ಇಳಿಕೆಯಾಗಿದೆ.
2023ರ ಮೇಯಿಂದ ಜುಲೈವರೆಗೆ 3,122 ಮಂದಿ ಸಾವನ್ನಪ್ಪಿದ್ದರೆ, ಪ್ರಸ್ತಕ ವರ್ಷದ ಇದೇ ಅವಧಿಯಲ್ಲಿ 2,682 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಪ್ರತಿದಿನ ಸರಾಸರಿ 29 ಮಂದಿ ಆ್ಯಕ್ಸಿಡೆಂಟ್ನಲ್ಲಿ ಸಾವನ್ನಪ್ಪಿದರೆ, ಕಳೆದ ವರ್ಷ ಸರಾಸರಿ 34 ಮಂದಿ ರಸ್ತೆ ಅಪಘಾತದಲ್ಲಿ ಬಲಿಯಾಗಿದ್ದರು ಎಂಬ ಅಂಶ ಬಹಿರಂಗವಾಗಿದೆ.
"ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಗಳಲ್ಲಿ ಸಂಭವಿಸುತ್ತಿರುವ ಅಪಘಾತ ಪ್ರಕರಣಗಳಿಗೆ ಮಿತಿಮೀರಿದ ವೇಗದಲ್ಲಿ ವಾಹನ ಚಾಲನೆ ಹಾಗೂ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದೇ ಕಾರಣ. ಜೊತೆಗೆ ರಸ್ತೆ ಮೂಲಸೌಕರ್ಯ ಕೊರತೆ, ಅಜಾಗರೂಕತೆಯಿಂದ ವಾಹನ ಚಾಲನೆ ಎಂದು ಕಂಡುಕೊಂಡಿರುವ ಪೊಲೀಸರು ಇದನ್ನ ತಹಬದಿಗೆ ತರಲು ವೇಗದ ಮಿತಿ ನಿಗದಿ, ನಿರಂತರ ಡ್ರಂಕ್ ಅಂಡ್ ಡ್ರೈವ್ ತಪಾಸಣೆ, ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸದವರ ವಿರುದ್ಧ ವಿಶೇಷ ಕಾರ್ಯಾಚರಣೆ ಹಾಗೂ ಗೂಡ್ಸ್ ವಾಹನಗಳಿಗೆ ಶಿಸ್ತುಪಥ, ಬ್ಲ್ಯಾಕ್ ಸ್ಪಾಟ್ ಗಳಲ್ಲಿರುವ ರಸ್ತೆ ಲೋಪದೋಷಗಳ ನಿವಾರಣೆಯಿಂದಾಗಿ ಸಾವನ್ನಪ್ಪುವರ ಸಂಖ್ಯೆಯಲ್ಲಿ ಕಡಿಮೆಯಾಗಿದೆ" ಎಂದು 'ಈಟಿವಿ ಭಾರತ್'ಗೆ ಸಂಚಾರ ಹಾಗೂ ರಸ್ತೆ ಸುರಕ್ಷತೆ ಇಲಾಖೆಯ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್ ತಿಳಿಸಿದ್ದಾರೆ.