ಕರ್ನಾಟಕ

karnataka

ETV Bharat / state

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ಪ್ರಕರಣಗಳ ತಡೆಯಲು ಆಧಾರ್‌ ಜೋಡಣೆಗೆ ಚಾಲನೆ: ಸಚಿವ ಕೃಷ್ಣ ಬೈರೇಗೌಡ - Minister Krishna Byregowda - MINISTER KRISHNA BYREGOWDA

ಇಂದು ರಾಜ್ಯಾದ್ಯಂತ ಆರ್​ಟಿಸಿಗೆ ಆಧಾರ್​ ಜೋಡಿಸುವ ಅಭಿಯಾನಕ್ಕೆ ಚಾಲನೆ ನೀಡಲಾಗಿದ್ದು, ಸೆ.2 ರಿಂದ ರಾಜ್ಯಾದ್ಯಂತ ಎನಿವೇರ್‌ ನೋಂದಣಿಗೆ ಚಾಲನೆ ನೀಡಲಾಗುವುದು ಎಂದು ಮಾಧ್ಯಮಗೋಷ್ಟಿಯಲ್ಲಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.

Minister Krishna Byregowda Pressmeet
ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗೋಷ್ಟಿ (ETV Bharat)

By ETV Bharat Karnataka Team

Published : Aug 26, 2024, 8:51 PM IST

Updated : Aug 26, 2024, 11:02 PM IST

ಬೆಂಗಳೂರು: "ಯಾರದ್ದೋ ಆಸ್ತಿಗೆ ನಕಲಿ ವ್ಯಕ್ತಿತ್ವದ ದಾಖಲೆ ಸೃಷ್ಟಿಸಿ ಅಮಾಯಕರನ್ನು ವಂಚಿಸುವ ಪ್ರಕರಣಗಳನ್ನು ತಡೆಯುವ ಉದ್ದೇಶದಿಂದ ಆರ್‌ಟಿಸಿಗೆ ಆಧಾರ್‌ ಜೋಡಿಸುವ ಅಭಿಯಾನಕ್ಕೆ ಇಂದಿನಿಂದ ಅಧಿಕೃತ ಚಾಲನೆ ನೀಡಲಾಗಿದೆ" ಎಂದು ಸಚಿವ ಕೃಷ್ಣಬೈರೇಗೌಡ ತಿಳಿಸಿದರು.

ಸಚಿವ ಕೃಷ್ಣ ಬೈರೇಗೌಡ ಮಾಧ್ಯಮಗೋಷ್ಟಿ (ETV Bharat)

ವಿಕಾಸಸೌಧದಲ್ಲಿ ಸೋಮವಾರ ಸಂಜೆ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, "ಅಮಾಯಕರ ಜಮೀನುಗಳನ್ನು ವ್ಯವಸ್ಥಿತವಾಗಿ ದೋಚುವ ಕೆಲಸವಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಸತ್ತವರ ಜಮೀನುಗಳನ್ನೂ ಸಹ ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿರುವ ಕುರಿತು ರಾಜ್ಯದ ಮೂಲೆ ಮೂಲೆಯಿಂದ ದೂರುಗಳು ಕೇಳಿ ಬರುತ್ತಿವೆ. ಇದರಿಂದ ವಂಚನೆಗೊಳಗಾದವರು ಹಲವು ವರ್ಷಗಳಿಂದ ಕೋರ್ಟ್‌ ಕಚೇರಿಗೆ ಅಲೆಯುವಂತಾಗಿದೆ. ಇಂತಹ ಪ್ರಕರಣಗಳನ್ನು ತಡೆಯುವ ಹಾಗೂ ಜನಸಾಮಾನ್ಯರ ಪಾಲಿಗೆ ಅವರ ಜಮೀನಿನ ಹಕ್ಕನ್ನು ರಕ್ಷಿಸಿ ಅಧಿಕೃತಗೊಳಿಸುವ ಉದ್ದೇಶದಿಂದ ಆಧಾರ್‌ ಜೋಡಣೆ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ" ಎಂದರು.

"ನಕಲಿ ದಾಖಲೆ ಸೃಷ್ಟಿಸಿ ಜಮೀನನ್ನು ದೋಚುವವರ ಕೃತ್ಯಕ್ಕೆ ಕಡಿವಾಣ ಹಾಕಬೇಕು ಎಂಬ ಒತ್ತಾಯ ಹಲವು ಜನರಿಂದ ಕೇಳಿಬಂದಿತ್ತು. ಇತ್ತೀಚೆಗೆ ಹಲವು ಶಾಸಕರು, ಸಚಿವರು ಹಾಗೂ ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಬಗ್ಗೆ ಕಠಿಣ ಕ್ರಮ ಜರುಗಿಸುವಂತೆ ಸೂಚಿಸಿದ್ದರು. ಇದೇ ಕಾರಣಕ್ಕೆ ಆಧಾರ್‌ ಜೋಡಣೆ ಅಭಿಯಾನಕ್ಕೆ ಮೂರು ತಾಲೂಕುಗಳಲ್ಲಿ ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಇದೀಗ ಪ್ರಾಯೋಗ ಯಶಸ್ವಿಯಾಗಿದ್ದು ಇಂದಿನಿಂದಲೇ ರಾಜ್ಯಾದ್ಯಂತ ಆಧಾರ್‌ ಜೋಡಣೆ ಅಭಿಯಾನವನ್ನು ವಿಸ್ತರಿಸಲಾಗಿದೆ" ಎಂದು ಸಚಿವರು ಮಾಹಿತಿ ನೀಡಿದರು.

"ಜನ ಸಾಮಾನ್ಯರು ಇದನ್ನು ಅನಾನುಕೂಲ ಎಂದು ಭಾವಿಸದೆ ಜಮೀನಿನ ಮಾಲೀಕತ್ವದ ಸುರಕ್ಷತೆಯ ದೃಷ್ಟಿಯಿಂದ ಹಾಗೂ ವಂಚನೆ ಪ್ರಕರಣಗಳನ್ನು ತಪ್ಪಿಸುವ ಉದ್ದೇಶದಿಂದ ನೋಂದಣಿ ಸಮಯದಲ್ಲಿ ಆಧಾರ್‌ ಜೋಡಣೆಗೆ ಸಕಾರಾತ್ಮಕವಾಗಿ ಸಹಕಾರ ನೀಡಬೇಕು" ಎಂದು ನಾಗರಿಕರಿಗೆ ಮನವಿ ಮಾಡಿದರು.

ಸೆ.2 ರಿಂದ ರಾಜ್ಯಾದ್ಯಂತ ಎನಿವೇರ್‌ ನೋಂದಣಿ:"ಸೆಪ್ಟಂಬರ್ 2 ರಿಂದ 'ಎನಿವೇರ್‌ ನೋಂದಣಿ' ವ್ಯವಸ್ಥೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ರಾಜ್ಯದಲಿ 252 ಉಪ ನೋಂದಣಾಧಿಕಾರಿ (ಸಬ್‌ ರಿಜಿಸ್ಟ್ರಾರ್) ಕಚೇರಿ ಇದೆ. ಆದರೆ, ಈ ಪೈಕಿ 50 ಕಚೇರಿಗಳಲ್ಲಿ ಮಾತ್ರ ಸಿಬ್ಬಂದಿಗೆ ಹೆಚ್ಚು ಕೆಲಸದ ಒತ್ತಡ ಇದೆ. ಹೀಗಾಗಿ ಆ ಕಚೇರಿಗಳಿಗೆ ಬರುವ ಜನರಿಗೆ ಅನಾನುಕೂಲವಾಗುತ್ತಿದೆ. ಸಮಯಕ್ಕೆ ಸರಿಯಾಗಿ ಕೆಲಸ ಆಗಲ್ಲ, ಕಾಯಬೇಕು, ಮಧ್ಯವರ್ತಿಗಳ ಕಾಟ ಇದೆ ಎಂಬ ದೂರುಗಳಿವೆ. ಇದೇ ಕಾರಣಕ್ಕೆ 'ಎನಿವೇರ್‌ ನೋಂದಣಿ' ವ್ಯವಸ್ಥೆಗೆ ಚಾಲನೆ ನೀಡಲಾಯಿತು" ಎಂದರು.

"ಆಸ್ತಿ ನೋಂದಣಿಗೆ ಮುಂದಾಗುವ ವ್ಯಕ್ತಿ ತನ್ನ ಜಿಲ್ಲೆ ವ್ಯಾಪ್ತಿಯ, ತನಗೆ ಅನುಕೂಲವಾಗುವ ಹಾಗೂ ಜನಸಂದಣಿ ಇಲ್ಲದ ಯಾವುದೇ ಉಪನೋಂದಣಿ ಕಚೇರಿಗೆ ತೆರಳಿ ಆನ್‌ಲೈನ್‌ ಮೂಲಕ ಸಮಯ ಕಾಯ್ದಿರಿಸಿ ತನ್ನ ಆಸ್ತಿ ನೋಂದಣಿ ಮಾಡಿಕೊಳ್ಳಲು ಎನಿವೇರ್ ಅಡಿಯಲ್ಲಿ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ, ಈ ಯೋಜನೆಯನ್ನು ಫೆಬ್ರವರಿಯಿಂದಲೇ ತುಮಕೂರು ಹಾಗೂ ಬೆಳಗಾವಿಯಲ್ಲಿ ಪ್ರಯೋಗಿಕವಾಗಿ ಚಾಲನೆ ನೀಡಲಾಗಿತ್ತು. ಆ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಎನಿವೇರ್‌ ನೋಂದಣಿಯನ್ನು ಇದೀಗ ಎಲ್ಲಾ ಜಿಲ್ಲೆಯಲ್ಲೂ ವಿಸ್ತರಿಸಲು ನಿರ್ಧರಿಸಲಾಗಿದೆ. ಇದರಿಂದ ಕಚೇರಿಯಲ್ಲಿ ಜನಜಂಗುಳಿ, ಸಿಬ್ಬಂದಿಗೆ ಕೆಲಸದ ಒತ್ತಡ ಕಡಿಮೆ ಮಾಡಿ ಸುಲಲಿತವಾಗಿ ಜನರಿಗೆ ನೋದಂಣಿ ಕೆಲಸ ಆಗಲು ಈ ಯೋಜನೆ ಸಹಕಾರಿ ಆಗಲಿದೆ" ಎಂದು ಮಾಹಿತಿ ನೀಡದರು.

ತಂತ್ರಜ್ಞಾನ ಬಳಸಿ ಜನಸ್ನೇಹಿ ಆಡಳಿತ: "ಕಂದಾಯ ಇಲಾಖೆಯಲ್ಲಿ ಜನಸ್ನೇಹಿ ಆಡಳಿತ ನೀಡುವ ನಿಟ್ಟಿನಲ್ಲಿ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಆಸ್ತಿ ನೋಂದಣಿ ಅವಧಿಯನ್ನು ಕಡಿತಗೊಳಿಸಿ ಜನರ ಕೆಲಸಗಳಿಗೆ ವೇಗ ನೀಡುವ ನಿಟ್ಟಿನಲ್ಲಿ ಕಾವೇರಿ-2 ತಂತ್ರಜ್ಞಾನವನ್ನು ಜಾರಿಗೆ ತರಲಾಗಿತ್ತು. ಇದೀಗ ಮತ್ತೊಮ್ಮೆ ಜನರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಆರ್‌ಟಿಸಿಗೆ 'ಆಧಾರ್‌ ಜೋಡಣೆ' ಹಾಗೂ 'ಎನಿವೇರ್‌ ನೋಂದಣಿ' ವ್ಯವಸ್ಥೆಗೆ ಚಾಲನೆ ನೀಡಲಾಗುತ್ತಿದೆ" ಎಂದು ಹೇಳಿದರು.

ಈ ವೇಳೆ ಪ್ರಧಾನ ಕಾರ್ಯದರ್ಶಿ ವಿ.ರಶ್ಮಿ ಮಹೇಶ್‌ ಹಾಗೂ ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತ ದಯಾನಂದ ಕೆ.ಎ. ಉಪಸ್ಥಿತರಿದ್ದರು.

ಇದನ್ನೂ ಓದಿ:ಹಿಂದಿನ ಬಿಜೆಪಿ ಸರ್ಕಾರದ ಆದೇಶದಂತೆಯೇ ಜಿಂದಾಲ್​ಗೆ ಭೂಮಿ ನೀಡಲು ತೀರ್ಮಾನ: ಸಚಿವ ಎಂ.ಬಿ.ಪಾಟೀಲ್ - Land Allotment To Jindal

Last Updated : Aug 26, 2024, 11:02 PM IST

ABOUT THE AUTHOR

...view details