ಕಾರವಾರ:ಜಿಲ್ಲೆಯಲ್ಲಿ ಮಳೆಯ ಅಬ್ಬರ ಒಂದೆಡೆಯಾದರೆ ಇನ್ನೊಂದೆಡೆ ಕಡಲ ಅಲೆಗಳ ಅಬ್ಬರವೂ ಹೆಚ್ಚಾಗಿದೆ. ಕಡಲಕೊರತಕ್ಕೆ ಕಾರವಾರ ತಾಲೂಕಿನ ಬಾವಳ ಗ್ರಾಮದಲ್ಲಿ ಕಾಂಕ್ರೀಟ್ ರಸ್ತೆ ಕೊಚ್ಚಿಹೋಗಿದೆ. ಅಲೆಗಳ ಅಬ್ಬರ ಹೆಚ್ಚಾಗಿದ್ದು ಕಳೆದ ಒಂದು ತಿಂಗಳಿನಿಂದ ಕಡಲಕೊರತ ಜಾಸ್ತಿಯಾಗಿದೆ. ತಾಲೂಕಿನ ಮಾಜಾಳಿ, ದೇವಭಾಗ, ಬಾವಳ, ದಂಡೇಭಾಗ್ ಭಾಗದಲ್ಲಿ ಕಡಲಕೊರೆತ ಅಧಿಕವಾಗಿದೆ.
20 ದಿನಗಳ ಹಿಂದೆ ಕಡಲಕೊರೆತಕ್ಕೆ ದೇವಭಾಗ್ ಜಂಗಲ್ ರೆಸಾರ್ಟ್ಗೆ ಸೇರಿದ ಸುಮಾರು 4 ಕಾಟೇಜ್ಗಳು ಕೊಚ್ಚಿ ಹೋಗಿತ್ತು. ಸದ್ಯ ಬಾವಳದಲ್ಲಿ ಕಡಲಕೊರತಕ್ಕೆ ರಸ್ತೆಯೇ ಕೊಚ್ಚಿ ಹೋಗಿದೆ.
ಸುಮಾರು 200 ಅಡಿ ಉದ್ದದ್ದ ಕಾಂಕ್ರೀಟ್ ರಸ್ತೆ ಕೊಚ್ಚಿ ಹೋಗಿದ್ದು, ಒಂದೆರಡು ದಿನದಲ್ಲಿ ಇನ್ನು 300 ಅಡಿ ರಸ್ತೆ ಕೊಚ್ಚಿ ಹೋಗುವ ಸಾಧ್ಯತೆ ಇದೆ. ಕಳೆದ ಐದು ವರ್ಷದ ಹಿಂದೆ ಈ ರಸ್ತೆ ನಿರ್ಮಾಣವಾಗಿದ್ದು, ದೇವಭಾಗ್ನಿಂದ ಮಾಜಾಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯಾಗಿದೆ. ರಸ್ತೆ ಕೊಚ್ಚಿ ಹೋಗಿರುವುದರಿಂದ ಕಡಲ ತೀರದಲ್ಲಿರುವ ಮೀನುಗಾರರಿಗೆ ಸಾಕಷ್ಟು ಸಮಸ್ಯೆಯಾಗಿದೆ.
ಕಳೆದ ಮೂರು ದಿನಗಳಿಂದ ರಸ್ತೆ ಬಳಿ ಅಲೆಗಳು ಬಂದು ಅಪ್ಪಳಿಸುತ್ತಿದ್ದು ಗುರುವಾರ ಮಧ್ಯಾಹ್ನದ ವೇಳೆಗೆ ರಸ್ತೆ ಕೆಳಗೆ ಹಾಕಿದ್ದ ಮಣ್ಣು ಕೊಚ್ಚಿ ಹೋಗಿದೆ. ಈ ಸಂದರ್ಭದಲ್ಲಿ ಯಾವ ವಾಹನ ಓಡಾಡುತ್ತಿರಲಿಲ್ಲ. ಹೀಗಾಗಿ ವಾಹನ ಸವಾರರು ಅಪಾಯದಿಂದ ಪಾರಾಗಿದ್ದಾರೆ. ದೇವಭಾಗ್ನಿಂದ ಮಾಜಾಳಿಯವರೆಗೆ ಸುಮಾರು ಮುನ್ನೂರಕ್ಕೂ ಅಧಿಕ ಮೀನುಗಾರರ ಮನೆ ಇದೆ. ಬೋಟ್ಗಳಲ್ಲಿ ಮೀನುಗಾರಿಕೆ ಮಾಡಲಾಗುತ್ತದೆ. ಸದ್ಯ ಮೀನುಗಾರಿಕೆ ಪ್ರಾರಂಭ ಮಾಡುವ ವೇಳೆ ರಸ್ತೆ ಕೊಚ್ಚಿ ಹೋಗಿದ್ದು, ಸಾಕಷ್ಟು ಸಮಸ್ಯೆಯಾಗಿದೆ. ಅಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ. ತಕ್ಷಣ ರಸ್ತೆ ಸರಿಪಡಿಸುವ ಕೆಲಸ ಮಾಡಬೇಕು ಎಂದು ಸ್ಥಳೀಯರಾದ ದೇವರಾಜ್ ಸೈಲ್ ಆಗ್ರಹಿಸಿದರು.