ಮೈಸೂರು:ನಾಡಹಬ್ಬ ಮೈಸೂರು ದಸರಾ ಅಂಗವಾಗಿ ನಗರದ ಹೊರವಲಯ ಉತ್ತನಹಳ್ಳಿ ಆವರಣದಲ್ಲಿ ಆಯೋಜಿಸಿದ್ದ 'ಯುವ ದಸರಾ'ದ 4ನೇ ದಿನದ ಕಾರ್ಯಕ್ರಮವು ಅದ್ಧೂರಿಯಾಗಿ ನಡೆಯಿತು. ಹೆಸರಾಂತ ಸಂಗೀತ ನಿರ್ದೇಶಕ, ಸಂಯೋಜಕರಾದ ಎ.ಆರ್.ರಹಮಾನ್ ಹಾಗೂ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರ ಕಂಠಸಿರಿ ಯುವ ದಸರಾದ ಮೆರುಗು ಹೆಚ್ಚಿಸಿತು.
'ಜೈ ಹೋ' ಗೀತೆಯ ಮೂಲಕ ಆಗಮಿಸಿ, ಪ್ರೇಕ್ಷಕರೆದುರು ಎಂಟ್ರಿ ಕೊಟ್ಟ ರಹಮಾನ್, ದೇಶ ಭಕ್ತಿಗೀತೆಗಳ ಮೂಲಕ ಕಾರ್ಯಕ್ರಮ ಆರಂಭಿಸಿ ರೋಮಾಂಚನಗೊಳಿಸಿದರು. 'ಫನಾ ಫಾನ' ಗೀತೆಯ ಬೀಟ್ಸ್ಗಳಿಗೆ ಯುವ ಸಮೂಹವು ಕುಣಿದು ಕುಪ್ಪಳಿಸಿತು. ರಹಮಾನ್ ಕಂಠದಿಂದ ಮೂಡಿಬಂದ 'ಧಮ್ ದಾರ ಧಮ್ ದಾರ ವಾಸ್ತು ಧಮ್ ದಾರ' ಗೀತೆಗೆ ಪ್ರೇಕ್ಷಕರು ಹೆಜ್ಜೆ ಹಾಕಿ, ಕುಣಿದು ಕುಪ್ಪಳಿಸಿ ಯುವ ಸಂಭ್ರಮದಲ್ಲಿ ತೇಲಾಡಿದರು.
'ಎನ್ನ ಸೋಣ ರಬ್ ನೆ ಬನಾಯಾ', 'ಎ ಮಸಕಲಿ ಮಸಕಲಿ', 'ದಮ್ ದರ ದಮ್ ದರ', 'ಕಿರುನಗೆ ಕಿರುನಗೆ ಹೃದಯದಲ್ಲಿ' ಗೀತೆ ಹೀಗೆ ಸುಮಾರು 20ಕ್ಕಿಂತ ಅಧಿಕ ಕನ್ನಡ, ತಮಿಳು, ಹಿಂದಿ ಗೀತೆಗಳ ಮೂಲಕ ಎ.ಅರ್.ರಹಮಾನ್ ಮತ್ತು ತಂಡದ ಗಾಯಕರು ಯುವ ಜನತೆಯ ಮನ ಸೆಳೆದರು.
ಡ್ಯಾನ್ಸಿಂಗ್ ಸ್ಟಾರ್ ಪ್ರಭುದೇವ ಅವರ ಚಿತ್ರದ 'ಮುಕ್ಕಾಲ ಮುಕಾಬುಲಾ' ಗೀತೆಯ ಜೊತೆಗೆ ಯುವ ಮನಸ್ಸುಗಳು ತಾಳ ಹಾಕಿದರು. 'ವಿರಪಂಡಿಯನ್' ಚಿತ್ರದ ಗೀತೆಗೆ ಹಿನ್ನೆಲೆ ಗಾಯಕಿ ಶ್ವೇತಾ ಮೋಹನ್ ಧ್ವನಿಗೂಡಿಸಿ ಕೇಳುಗರ ಮನಗಳಿಗೆ ಮುದ ನೀಡಿದರು. 'ಘರ್ ಆಜಾ ಘರ್ ಆಜಾ' ಗೀತೆಯ ಜೊತೆಗೆ ರ್‍ಯಾಪ್ ಬೀಟ್ಸ್ ಆರಂಭಿಸಿದ ಶ್ವೇತಾ ಮೋಹನ್, ಸ್ಪೀಕರ್ ಬೀಟ್ಸ್ ಜೊತೆಗೆ ಎದೆ ಝಲ್ ಎನ್ನುವಂತೆ ಮಾಡಿದರು. ಅಲ್ಲದೆ, 'ರಾಧೆ ಕೆ ಮೇ ಕೈಸೆ ಚಲೇ', 'ರಾಧಾ ಕೆ ಮೇ ಚಲೇ', 'ದಿಯಾ ಚಲೇ ಚಾ ಚಲೇ' ಗೀತೆಯನ್ನು ನಾಟ್ಯದ ಜೊತೆಗೆ ಪ್ರಸ್ತುತಪಡಿಸಿದರು.