ಬೆಳಗಾವಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಮಹಿಳೆಯರು ವಿವಿಧ ರೀತಿಯಲ್ಲಿ ಸದ್ಭಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆಯ ಹಣ ಕೂಡಿಟ್ಟು ಇಲ್ಲೊಬ್ಬ ತಾಯಿ ತನ್ನ ಸೊಸೆಯೊಂದಿಗೆ ಸೇರಿಕೊಂಡು ಮಗನಿಗೆ ಬೈಕ್ ಖರೀದಿಸಿ ಕೊಟ್ಟು ಗಮನ ಸೆಳೆದಿದ್ದಾರೆ.
ಗೋಕಾಕ್ ತಾಲೂಕಿನ ಕೌಜಲಗಿ ಗ್ರಾಮದ ಬಾಗವ್ವಾ ನೀಲಪ್ಪ ಸಣ್ಣಕ್ಕಿ ಎಂಬವರು ತಮ್ಮ ಮಗ ರಮೇಶ ಅವರಿಗೆ ದ್ವಿಚಕ್ರ ವಾಹನ ಕೊಡಿಸಿದ್ದಾರೆ. ಅತ್ತೆಯ ಕಾರ್ಯಕ್ಕೆ ಸೊಸೆ ಲಕ್ಷ್ಮೀ ಕೂಡ ಸಾಥ್ ಕೊಟ್ಟಿದ್ದಾರೆ. ಇಂದು ಬೆಳಿಗ್ಗೆ ಗೋಕಾಕದ ಶಕುಂತಲಾ ಹೊಂಡಾ ಶೋ ರೂಮ್ನಲ್ಲಿ ಬೈಕ್ ಡಿಲಿವರಿ ಪಡೆದರು.
ಹೊಸ ಬೈಕ್ ಖರೀದಿಗೆ ನೆರವಾದ ತಾಯಿ, ಸೊಸೆಯ ಗೃಹಲಕ್ಷ್ಮಿ ಯೋಜನೆ ಹಣ (ETV Bharat) ದಸರಾ ಹಬ್ಬದ ದಿನವೇ ಬೈಕ್ ಖರೀದಿಸಿ ಖುಷಿಪಟ್ಟರು. ಇದೇ ವೇಳೆ ಬೈಕ್ ಖರೀದಸಲು ನೆರವಾದ ಗೃಹಲಕ್ಷ್ಮಿ ಯೋಜನೆ, ಸಿಎಂ ಸಿದ್ದರಾಮಯ್ಯ ಮತ್ತು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ಸಣ್ಣಕ್ಕಿ ಕುಟುಂಬ ಸದಸ್ಯರು ಹೊಗಳಿದರು.
"ನನಗೆ ಬೈಕ್ ಅವಶ್ಯಕತೆ ಇತ್ತು. ನನ್ನ ತಾಯಿ 20 ಸಾವಿರ ರೂ ಮತ್ತು ಪತ್ನಿ 20 ಸಾವಿರ ರೂ. ಗೃಹಲಕ್ಷ್ಮಿ ಯೋಜನೆಯ ಹಣ ಸೇರಿಸಿಕೊಂಡು 1.18 ಲಕ್ಷ ರೂ.ಯ ಬೈಕ್ ಖರೀದಿಸಿದ್ದೇನೆ. ಮುಂದಿನ ಕಂತುಗಳನ್ನು ದುಡಿದು ತುಂಬುತ್ತೇನೆ. ನನಗೆ ಬಹಳ ಖುಷಿಯಾಗಿದೆ. ಗೃಹಲಕ್ಷ್ಮಿ ಯೋಜನೆಯಿಂದ ಕರ್ನಾಟಕದ ಎಲ್ಲ ಮಹಿಳೆಯರಿಗೂ ಬಹಳಷ್ಟು ಅನುಕೂಲವಾಗಿದೆ" ಎಂದು ರಮೇಶ ಸಣ್ಣಕ್ಕಿ ಹರ್ಷ ವ್ಯಕ್ತಪಡಿಸಿದರು.
ಹೊಸ ಬೈಕ್‌ಗೆ ಪೂಜೆ (ETV Bharat) ತಾಯಿ ಬಾಗವ್ವಾ ಸಣ್ಣಕ್ಕಿ ಮಾತನಾಡಿ, "ಗೃಹಲಕ್ಷ್ಮಿ ಹಣದಲ್ಲಿ ಬಂಗಾರ ಖರೀದಿಸಬೇಕೆಂಬ ಆಸೆ ಇತ್ತು. ಆದರೆ, ಮಗನಿಗೆ ಬೈಕ್ ಬೇಕಾಗಿತ್ತು. ಹಾಗಾಗಿ, ನಾನು ಮತ್ತು ಸೊಸೆ ಹಣ ಕೂಡಿಸಿಕೊಟ್ಟೆವು. ಗೃಹಲಕ್ಷ್ಮಿ ಹಣ ನಮ್ಮ ಬಾಳಿಗೆ ತುಂಬಾ ಅನುಕೂಲವಾಗಿದೆ" ಎಂದರು.
ಈ ವಿಚಾರ ತಿಳಿದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹರ್ಷ ವ್ಯಕ್ತಪಡಿಸಿ, "ಗೃಹಲಕ್ಷ್ಮಿ ಯೋಜನೆಯ ಹಣ ಇಂದು ಲಕ್ಷಾಂತರ ಮಹಿಳೆಯರ ಜೀವನದಲ್ಲಿ ಹೊಸ ಸಂಚಲನ ಮೂಡಿಸಿದ್ದು, ಬದುಕು ಕಟ್ಟಿಕೊಳ್ಳಲು ನೆರವಾಗಿದೆ. ಮಹಾನವಮಿ ಹಬ್ಬದಂದು ದ್ವಿಚಕ್ರ ವಾಹನ ಕೊಳ್ಳಲು ಮುಂದಾಗಿರುವ ಮಗನಿಗೆ ತಾಯಿ ಗೃಹಲಕ್ಷ್ಮಿ ಹಣ ನೀಡಿರುವ ವಿಷಯ ಕೇಳಿ ಖುಷಿಯಾಯಿತು. ಅವರಿಗೆ ಮನಃಪೂರ್ವಕ ಶುಭ ಕೋರುತ್ತೇನೆ" ಎಂದು ತಿಳಿಸಿದರು.
ಖರೀದಿಸಿದ ಹೊಸ ಬೈಕ್ (ETV Bharat) ಇದನ್ನೂ ಓದಿ:ಪತಿಯ ಕಣ್ಣಿನ ಶಸ್ತ್ರಚಿಕಿತ್ಸಗೆ ನೆರವಾದ ಗೃಹಲಕ್ಷ್ಮಿ ಯೋಜನೆ: ಸಿಎಂ ಸಿದ್ದರಾಮಯ್ಯಗೆ ಕೃತಜ್ಞತೆ ಸಲ್ಲಿಸಿದ ದಂಪತಿ - eye operation