ದಾವಣಗೆರೆ:ಅಲೆಮಾರಿ ದಂಪತಿಯ 1 ವರ್ಷ ಗಂಡು ಮಗು ನಾಪತ್ತೆಯಾದ ಘಟನೆ ನ.16ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಪೋಷಕರಾದ ಯುವರಾಜ್ ಪವಾರ್ ಮತ್ತು ಸಾರಿಕಾ ಪವಾರ್ ಹರಪನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿ ಒಂದು ತಿಂಗಳಾದರೂ ಮಗುವಿನ ಸುಳಿವು ಇನ್ನೂ ಪತ್ತೆಯಾಗಿಲ್ಲ. ಹೀಗಾಗಿ ಹೆತ್ತವರು ಅಳಲು ತೋಡಿಕೊಂಡಿದ್ದಾರೆ.
ಮಗುವಿನ ತಂದೆ ಯುವರಾಜ್ ಪವಾರ್ ಅವರು 'ಈಟಿವಿ ಭಾರತ್' ಜೊತೆ ಮಾತನಾಡಿ, "ಹರಪನಹಳ್ಳಿಯಲ್ಲಿ ಟೆಂಟ್ ಹಾಕಿಕೊಂಡು ರಾತ್ರಿ ವೇಳೆ ಮಲಗಿದ್ದಾಗ ಒಂದು ವರ್ಷ ಎರಡು ತಿಂಗಳು ವಯಸ್ಸಿನ ಪುತ್ರ ಆರ್ಯನ್ ನಾಪತ್ತೆಯಾಗಿದ್ದಾನೆ. ಮಗು ಹುಡುಕಿಕೊಡುವಂತೆ ಹರಪನಹಳ್ಳಿ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ದೂರು ನೀಡಿ ಒಂದು ತಿಂಗಳು ಕಳೆದಿದ್ದರೂ ಮಗುವಿನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ. ನಮ್ಮ ಮಗುವನ್ನು ಯಾರು ಅಪಹರಿಸಿದ್ದಾರೆ ಗೊತ್ತಿಲ್ಲ. ನಮಗೆ ಮಗುವನ್ನು ಹುಡುಕಿ ಕೊಡಿ" ಎಂದು ಅಳಲು ತೋಡಿಕೊಂಡರು.
1 ವರ್ಷದ ಗಂಡು ಮಗು ನಾಪತ್ತೆ: ಹುಡುಕಿ ಕೊಡುವಂತೆ ಅಲೆಮಾರಿ ದಂಪತಿಯ ಅಳಲು (ETV Bharat) ಮಗುವಿನ ತಾಯಿ ಸಾರಿಕಾ ಪವಾರ್ ಮಾತನಾಡಿ, "ನಾವು ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನಿಂದ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದೇವೆ. ನ.16 ರಂದು ಮಗು ಕಾಣೆಯಾಗಿದೆ. ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರೂ ಏನು ಪ್ರಯೋಜನವಾಗಿಲ್ಲ. ಹೊಸಪೇಟೆ, ಬೆಳಗಾವಿ ಸೇರಿದಂತೆ ವಿವಿಧೆಡೆ ಹುಡುಕಾಡಿದರೂ ಮಗುವಿನ ಸುಳಿವು ಸಿಕ್ಕಿಲ್ಲ" ಎಂದರು.
ವಕೀಲ ಬಾಬು ಪಂಡಿತ್ ಗೋಸಾಮಿ ಮಾತನಾಡಿ, "ಅಲೆಮಾರಿ ದಂಪತಿ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆಯಿಂದ ಗಂಧದ ಎಣ್ಣೆ ವ್ಯಾಪಾರಕ್ಕೆಂದು ಹರಪನಹಳ್ಳಿಗೆ ಬಂದಿದ್ದರು. ಈ ವೇಳೆ ಹರಪನಹಳ್ಳಿಯ ಯಮಹಾ ಶೋರೂಮ್ ಬಳಿ ಟೆಂಟ್ ಹಾಕಿದ್ದರು. ಪುತ್ರ ಆರ್ಯನ್ ಜತೆ ಟೆಂಟ್ನಲ್ಲೇ ದಂಪತಿ ನೆಲೆಸಿದ್ದರು. ನ.16ರ ರಾತ್ರಿ ಟೆಂಟ್ನಲ್ಲಿ ಮಲಗಿದ್ದಾಗ ಮಗು ನಾಪತ್ತೆಯಾಗಿದೆ. ಈ ಸಂಬಂಧ ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಹಾಕಿಸಿದ್ದೇವೆ" ಎಂದು ತಿಳಿಸಿದರು.
ಇದನ್ನೂ ಓದಿ:ಬೆಳಗಾವಿ: 2 ತಿಂಗಳ ಹಸುಗೂಸನ್ನು ಕೆರೆಗೆ ಎಸೆದ ತಾಯಿ, ಸ್ಥಳೀಯರಿಂದ ರಕ್ಷಣೆ