ತಿರುಮಲ/ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರ ತಿರುಮಲಕ್ಕೆ ಶ್ರೀವೆಂಕಟೇಶ್ವರ ಸ್ವಾಮಿಯ ದರ್ಶನಕ್ಕಾಗಿ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ರೂ.200 ಕೋಟಿಗಳ ವೆಚ್ಚದಲ್ಲಿ ಸುಸಜ್ಜಿತ ಮೂರು ವಸತಿ ಸಂಕೀರ್ಣಗಳು, ಒಂದು ಸುಸಜ್ಜಿತ ಕಲ್ಯಾಣ ಮಂಟಪ ಹಾಗೂ ಹಾಲಿ ಇದ್ದ ಪ್ರವಾಸಿ ಸೌಧವನ್ನು ಉನ್ನತೀಕರಿಸುವ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ.
ಈಗಾಗಲೇ 110 AC ಕೊಠಡಿಗಳ ಬ್ಲಾಕ್ -2 ( ಹಂಪಿ ಬ್ಲಾಕ್) ಅನ್ನು ಸಾರ್ವಜನಿಕರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ. ಕರ್ನಾಟಕ ರಾಜ್ಯ ಛತ್ರದಲ್ಲಿ ನೂತನವಾಗಿ ನಿರ್ಮಿಸಿರುವ ವಸತಿ ಸಂಕೀರ್ಣಗಳ ಪೈಕಿ 132 ಹವಾನಿಯಂತ್ರಣರಹಿತ ಕೊಠಡಿಗಳನ್ನು ಹೊಂದಿರುವ ಐಹೊಳೆ ಬ್ಲಾಕ್ ಕಟ್ಟಡವನ್ನು ಮಂಗಳವಾರ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಉದ್ಘಾಟಿಸಿದರು.
ಈ ಕಟ್ಟಡದಲ್ಲಿನ ಪ್ರತಿ ಕೊಠಡಿಗಳಿಗೆ 24 ಗಂಟೆಗಳ ಅವಧಿಗೆ ಕೊಠಡಿ ನಿರ್ವಹಣಾ ಶುಲ್ಕ ರೂ.1350/- (+GST) ನಿಗದಿ ಪಡಿಸಿದ್ದು, ಕಡಿಮೆ ಬೆಲೆಯಲ್ಲಿ ಸುಸಜ್ಜಿತ ಕೊಠಡಿಗಳನ್ನು ಯಾತ್ರಾರ್ಥಿಗಳಿಗೆ ಒದಗಿಸುವ ಮೂಲಕ ಅನುಕೂಲ ಮಾಡಿಕೊಡಲಾಗಿದೆ.
ನೂತನವಾಗಿ ತಿರುಮಲದಲ್ಲಿ ನಿರ್ಮಿಸಲಾಗಿರುವ ವಸತಿ ಸಂಕೀರ್ಣ ಮತ್ತು ಶ್ರೀ ಕೃಷ್ಣದೇವರಾಯ ಬ್ಲಾಕ್ ನಲ್ಲಿನ 36 ಹವಾ ನಿಯಂತ್ರಿತ ಸೂಟ್‌ಗಳನ್ನು ಹಾಗೂ 500 ಆಸನಗಳ ಸಾಮರ್ಥ್ಯವುಳ್ಳ ತಿರುಮಲದಲ್ಲಿಯೇ ಬೃಹತ್ ಹಾಗೂ ನವೀನ ಮಾದರಿಯ ಸುಸಜ್ಜಿತ ಕಲ್ಯಾಣ ಮಂಟಪವಾದ ಶ್ರೀ ಕೃಷ್ಣ ಒಡೆಯರ್ ಬ್ಲಾಕ್ ಕಟ್ಟಡಗಳ ಕಾಮಗಾರಿ ಮುಕ್ತಾಯಗೊಂಡಿದ್ದು, ಅಂತಿಮ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸಲಾಗುತ್ತಿದೆ.