ಮಂಗಳೂರು: ಬೇರೆ ವ್ಯಕ್ತಿಯನ್ನು ವಿವಾಹವಾಗಲು ಸಿದ್ಧವಾಗಿದ್ದ ಪ್ರೇಯಸಿಯನ್ನು ಕೊಲೆ ಮಾಡಿದ ಪ್ರಕರಣದಲ್ಲಿ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೆನಕೊಟ್ಟಿ ತಾಂಡಾದ ಸಂದೀಪ್ ರಾಥೋಡ್ (23) ಎಂಬಾತನಿಗೆ ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ ದಂಡ ವಿಧಿಸಿದೆ.
ಪ್ರಕರಣದ ಹಿನ್ನೆಲೆ:ಈ ಪ್ರಕರಣದ ಆರೋಪಿ ಸಂದೀಪ್ ರಾಥೋಡ್ ಮತ್ತು ಮೃತ ಅಂಜನಾ ವಸಿಷ್ಠ ಅವರು 2018ನೇ ಇಸವಿಯ ಜುಲೈ ತಿಂಗಳಿನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿ, ನಂತರ ಪರಸ್ಪರ ಪ್ರೀತಿಸುತ್ತಿದ್ದರು. ಉದ್ಯೋಗ ಪಡೆದ ಬಳಿಕ ಮದುವೆಯಾದರೆ ಜೀವನ ಸಾಗಿಸಲು ಹಣಕಾಸಿನ ತೊಂದರೆ ಇರುವುದಿಲ್ಲ ಮತ್ತು ಮನೆಯವರನ್ನು ಕೂಡ ಒಪ್ಪಿಸಿ ಮದುವೆಯಾಗಬಹುದು ಎಂದು ಅವರಿಬ್ಬರು ಮಾತನಾಡಿಕೊಂಡಿದ್ದರು.
ಅದರಂತೆಯೇ ಆರೋಪಿ ಸಂದೀಪ್ ರಾಥೋಡ್ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆಯಾಗಲು ಲಿಖಿತ ಪರೀಕ್ಷೆಯ ಪೂರ್ವ ತಯಾರಿಗಾಗಿ ಮಂಗಳೂರಿನ ಹಂಪನಕಟ್ಟೆಯ ರಾಯಲ್ ಅಕಾಡೆಮಿ ಕೋಚಿಂಗ್ ಸೆಂಟರ್ಗೆ ಬಂದಿದ್ದನು. ತರಬೇತಿಗೆ ಹಾಜರಾಗಲು ಮಂಗಳೂರಿನಲ್ಲಿ ಉಳಿದುಕೊಳ್ಳುವ ಸಲುವಾಗಿ ತಾವಿಬ್ಬರು ಗಂಡ ಹೆಂಡತಿ ಎಂದು ಹಾಗೂ ಆರೋಪಿ ತಾನು ಕಾನ್ಸ್ಟೇಬಲ್ ಆಗಿದ್ದು, ಪಿಎಸ್ಐ ಹುದ್ದೆಯ ತರಬೇತಿಗಾಗಿ ಮಂಗಳೂರಿಗೆ ಬಂದಿರುವುದಾಗಿ ಹೇಳಿ ರೂಂ ಪಡೆದುಕೊಂಡಿದ್ದನು.
ಅಂಜನಾ ವಸಿಷ್ಠಳು ತನ್ನ ಊರಿಗೆ ಹೋಗಿದ್ದ ಅವಧಿಯಲ್ಲಿ, ಆಕೆಗೆ ವಿವಾಹ ಮಾಡಲು ಆಕೆಯ ತಂದೆ ತಾಯಿ ನಿರ್ಧರಿಸಿ ಹುಡುಗನನ್ನು ತೋರಿಸಿ, ಮಾತುಕತೆ ನಡೆಸಿದ್ದರು. ಅಂಜನಾ ವಸಿಷ್ಠ ತಂದೆ ತಾಯಿಯ ಆಸೆಯಂತ ಮದುವೆಗೆ ಒಪ್ಪಿಕೊಂಡು, ಆ ವಿಚಾರವನ್ನು ಆರೋಪಿ ಸಂದೀನ್ ರಾಥೋಡ್ಗೆ ತಿಳಿಸಿದ್ದಳು. ತನ್ನನ್ನು ಮರೆತುಬಿಡುವಂತೆ ಆಕೆ ವಿನಂತಿಸಿದ್ದಳು.
ಇದರಿಂದ ಕೋಪಗೊಂಡ ಸಂದೀಪ್ ಆಕೆಯನ್ನು ಪುಸಲಾಯಿಸಿ, ಆತ ಉಳಿದುಕೊಂಡಿದ್ದ ಮಂಗಳೂರಿಗೆ ಕರೆಸಿಕೊಂಡಿದ್ದ. ಅಂಜನಾ ವಸಿಷ್ಠ ತನ್ನನ್ನು ಬಿಟ್ಟು ತನ್ನ ಪ್ರೀತಿಯನ್ನು ಧಿಕ್ಕರಿಸಿ ಬೇರೆಯವರನ್ನು ಮದುವೆಯಾಗಲು ಹೋಗುತ್ತಿದ್ದಾಳೆ ಎಂದು ಕೋಪದಿಂದ ಆಕೆಯ ಜೊತೆ ಜಗಳ ತೆಗೆದು ಕೊಲೆ ಮಾಡುವ ಉದ್ದೇಶದಿಂದ ಹಿಡಿದು ಎಳೆದು ಬೆಡ್ಡಿನ ಮೇಲೆ ದೂಡಿ ಹಾಕಿ ತಲೆಯನ್ನು ರೂಮಿನಲ್ಲಿದ್ದ ಕಬ್ಬಿಣದ ಮಂಚದ ಸರಳಿನ ಸಂದಿಗೆ ತುರುಕಿಸಿ, ಅಲ್ಲಿಯೇ ಪಕ್ಕದಲ್ಲಿ ಗೋಡೆಗೆ ಅಳವಡಿಸಿದ ಟಿ.ವಿ ಕೇಬಲ್‌ನಿಂದ ಕುತ್ತಿಗೆಗೆ ಸುತ್ತ ಬಿಗಿದು ಕೊಲೆ ಮಾಡಿ ಮೃತಳ ಮೃತ ದೇಹದ ಫೋಟೋವನ್ನು ನೆನಪಿಗಾಗಿ ವಿಡಿಯೋ ರೆಕಾರ್ಡ್ ಮಾಡಿಕೊಂಡು, ಮೃತಳ ಎಟಿಎಂ ಕಾರ್ಡ್ ಹಾಗೂ ಮೊಬೈಲ್ ಫೋನ್ನನ್ನು ತೆಗೆದುಕೊಂಡು ಪರಾರಿಯಾಗಿದ್ದ.