ಬೆಂಗಳೂರು: ತನ್ನ ಬಳಿ ಬುಲೆಟ್ ಬೈಕ್ ಇಲ್ಲದಿರುವ ಹತಾಶೆಯಲ್ಲಿ ಪೆಟ್ರೋಲ್ ಕದ್ದು ನಗರದ ಮೂರು ದ್ವಿಚಕ್ರ ವಾಹನಗಳಿಗೆ ಬೆಂಕಿ ಇಟ್ಟ ಕಿಡಿಗೇಡಿಯನ್ನು ಪೀಣ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪುಲಕೀತ್ (25) ಬಂಧಿತ ಆರೋಪಿ.
ಮಹಾಲಕ್ಷ್ಮೀ ಲೇಔಟ್ನಲ್ಲಿ ವಾಸವಾಗಿರುವ ಈತ ಸೆ.19ರ ಬೆಳಗ್ಗೆ ಹೆಚ್.ಎಂ.ಟಿ ಲೇಔಟ್ ಪಿಜಿಯೊಂದರ ಮುಂದೆ ನಿಲ್ಲಿಸಿದ್ದ ರಾಯಲ್ ಎನ್ಫೀಲ್ಡ್ ಸೇರಿದಂತೆ ಮೂರು ದ್ವಿಚಕ್ರವಾಹನಗಳ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ದ. ಬೆಂಕಿಯ ತೀವ್ರತೆಗೆ ಮೂರು ದ್ವಿಚಕ್ರವಾಹನಗಳಿಗೆ ಹಾನಿಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಕಾಲೇಜು ವಿದ್ಯಾರ್ಥಿ ದೀಪಾಂಶು ಅಗರವಾಲ್ ಎಂಬವರು ನೀಡಿದ ದೂರು ಆಧರಿಸಿ ಆರೋಪಿಯನ್ನು ಬಂಧಿಸಲಾಗಿದೆ. ದೂರು ನೀಡಿದ ವಿದ್ಯಾರ್ಥಿ ಪಿಜಿಯಲ್ಲಿ ನೆಲೆಸಿದ್ದು, ಕೆಲ ತಿಂಗಳ ಹಿಂದೆ ಸೆಕೆಂಡ್ ಹ್ಯಾಂಡ್ ಬುಲೆಟ್ ಖರೀದಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.