ಕರ್ನಾಟಕ

karnataka

ETV Bharat / state

ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟ: ಮೂಲ ಪತ್ತೆ ಹಚ್ಚಲು DNA ಟೆಸ್ಟ್​​ಗೆ ಗ್ರಾಮಸ್ಥರ ಪಟ್ಟು! - FIGHT BETWEEN TWO VILLAGERS

ಗ್ರಾಮ ದೇವತೆಗೆ ಬಿಟ್ಟ ಕೋಣಕ್ಕಾಗಿ ಎರಡು ಗ್ರಾಮಗಳ ನಡುವೆ ಕಿತ್ತಾಟ ನಡೆದು, ಜನರು ಪೊಲೀಸ್‌ ಠಾಣೆಯ ಮೆಟ್ಟಿಲೇರಿದ ಘಟನೆ ನಡೆದಿದೆ. ಈ ಕುರಿತು ನಮ್ಮ ಪ್ರತಿನಿಧಿ ನೂರ್​ ಮಾಡಿರುವ ವರದಿ ಇಲ್ಲಿದೆ.

ಕೋಣಕ್ಕಾಗಿ ಎರಡು ಗ್ರಾಮಗಳ ಜನರ ನಡುವೆ ಕಿತ್ತಾಟ
ಕೋಣಕ್ಕಾಗಿ ಎರಡು ಗ್ರಾಮಗಳ ಜನರ ನಡುವೆ ಕಿತ್ತಾಟ (ETV Bharat)

By ETV Bharat Karnataka Team

Published : 4 hours ago

ದಾವಣಗೆರೆ:ಜಾಗ, ಕೆರೆ ನೀರು, ದೇವರ ಉತ್ಸವ ವಿಚಾರವಾಗಿ ಎರಡು ಗ್ರಾಮಗಳ ನಡುವೆ ಗಲಾಟೆ ಆಗಿರುವುದನ್ನು ನೀವು ಕೇಳಿರುತ್ತೀರಿ ಮತ್ತು ನೋಡಿರುತ್ತೀರಿ. ಆದರೆ ಹರಿಹರ ತಾಲೂಕಿನ ಕುಣಿಬೆಳಕೆರೆ ಮತ್ತು ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮಸ್ಥರ ಮಧ್ಯೆ ಕೋಣಕ್ಕಾಗಿ ಕಿತ್ತಾಟ ನಡೆದಿದೆ. ಈ ವಿಚಾರ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಹೌದು, ಹರಿಹರ ತಾಲೂಕಿನ ಕುಣಿಬೆಳಕೆರೆಯ ಗ್ರಾಮದಲ್ಲಿ 8 ವರ್ಷಗಳ ಹಿಂದೆ ಗ್ರಾಮದ ಶಕ್ತಿ ದೇವತೆ ಕರಿಯಮ್ಮ ದೇವಿಗೆ ಕೋಣವನ್ನು ಬಿಡಲಾಗಿತ್ತು.‌‌ ಆದರೆ ಒಂದು ವಾರದ ಹಿಂದೆ ಈ ಕೋಣ ಪಕ್ಕದ ದೇವರ ಬೆಳಕೆರೆ ಗ್ರಾಮಕ್ಕೆ ಹೋಗಿದೆ. ಈ ವೇಳೆ ಹೊನ್ನಾಳಿ ತಾಲೂಕಿನ ಕುಳಗಟ್ಟೆ ಗ್ರಾಮದ ಕೋಣ ಕೂಡ ಕಾಣೆಯಾಗಿದೆ. ಕುಳಗಟ್ಟೆ ಗ್ರಾಮಸ್ಥರು ಇದು ನಮ್ಮದೇ ಗ್ರಾಮದ ಕೋಣ ಎಂದು ತಮ್ಮ ಊರಿಗೆ ಎಳೆದೊಯ್ದಿದ್ದಾರೆ. ಈ ವಿಚಾರ ಗೊತ್ತಾಗುತಿದ್ದಂತೆ ಕುಣಿಬೆಳಕೆರೆ ಗ್ರಾಮಸ್ಥರು ಇದು ನಮ್ಮ ಊರಿನ ಕೋಣ ಎಂದು ಪ್ರತಿಪಾದಿಸಿದ್ದಾರೆ. ಇದೇ ವಿಚಾರವಾಗಿ ಎರಡು ಗ್ರಾಮಗಳ ಗ್ರಾಮಸ್ಥರ ಮಧ್ಯೆ ವಾಗ್ವಾದ ನಡೆದು, ಅಂತಿಮವಾಗಿ ಪೊಲೀಸ್ ಠಾಣೆ ಮೆಟ್ಟಿಲೇರುವಂತೆ ಮಾಡಿದೆ.

ಕೋಣಕ್ಕಾಗಿ ಎರಡು ಗ್ರಾಮಗಳ ಜನರ ನಡುವೆ ಕಿತ್ತಾಟ: ಮಾಲೀಕತ್ವ ಪತ್ತೆಗೆ DNA ಟೆಸ್ಟ್​​ಗೆ ಗ್ರಾಮಸ್ಥರ ಪಟ್ಟು! (ETV Bharat)

ಗ್ರಾಮಸ್ಥರಿಂದ ದೂರು, ಪ್ರತಿ ದೂರು:ಕುಣಿಬೆಳಕೆರೆ ಗ್ರಾಮಸ್ಥರು ಇದು ನಮ್ಮ ಊರಿನ ಕೋಣ, ನಮ್ಮ ಕೋಣವನ್ನು ಕುಳಗಟ್ಟೆ ಗ್ರಾಮದವರು ತೆಗೆದುಕೊಂಡು ಹೋಗಿದ್ದಾರೆ. ಅವರಿಂದ ಕೋಣವನ್ನು ವಾಪಸ್ ಕೊಡಿಸುವಂತೆ ಮಲೆಬೆನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ದೂರಿನ ವಿರುದ್ಧ ಕುಳಗಟ್ಟೆ ಗ್ರಾಮಸ್ಥರು ಕೂಡ ಇದು ನಮ್ಮ ಕೋಣ ನಮಗೆ ನ್ಯಾಯ ಕೊಡಿಸಿ ಅಂತ ಹೊನ್ನಾಳಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಈ ವೇಳೆ ಮಲೆಬೆನ್ನೂರು ಪೊಲೀಸರು ಕರೆದು ವಿಚಾರಣೆ ನಡೆಸಿದಾಗ ಎರಡು ಗ್ರಾಮದ ಗ್ರಾಮಸ್ಥರು ನಮ್ಮದೇ ಗ್ರಾಮದ ಕೋಣ ಅಂತ ಪಟ್ಟು ಹಿಡಿದಿದ್ದಾರೆ. ಇದರಿಂದ ಪೊಲೀಸರಿಗೆ ಗೊಂದಲವಾಗಿದೆ. ಎರಡು ಗ್ರಾಮದ ಗ್ರಾಮಸ್ಥರಲ್ಲಿ ಕೋಣದ ವಯಸ್ಸಿನ ಬಗ್ಗೆ ಚರ್ಚೆ ನಡೆದಿದೆ. ಕುಣಿಬೆಳಕೆರೆ ಗ್ರಾಮಸ್ಥರು ನಮ್ಮದು 8 ವರ್ಷದ ಕೋಣ ಎಂದರೆ, ಕುಳಗಟ್ಟೆ ಗ್ರಾಮಸ್ಥರು ನಮ್ಮದು 3 ವರ್ಷದ ಕೋಣ ಎಂದಿದ್ದಾರೆ.

ಶಿವಮೊಗ್ಗದ ಮಹಾವೀರ ಗೋಶಾಲೆಯಲ್ಲಿರುವ ಕೋಣ (ETV Bharat)

ಡಿಎನ್​ಎ ಪರೀಕ್ಷೆಗೆ ಆಗ್ರಹ:ಕೋಣ ಯಾರಿಗೆ ಸೇರಿದ್ದು ಅನ್ನೋದನ್ನು ಪತ್ತೆ ಮಾಡಲು ಪೊಲೀಸರು, ಕೋಣದ ವಯಸ್ಸು ಅರಿಯಲು ಪಶು ವೈದ್ಯರ ಮೊರೆ ಹೋಗಿದ್ದಾರೆ. ಪಶು ವೈದ್ಯರು ಹಲ್ಲುಗಳ ಆಧಾರದ ಮೇಲೆ ವಯಸ್ಸು ಪತ್ತೆ ಮಾಡಿ ಕೋಣ 6 ವರ್ಷ ಮೇಲ್ಪಟ್ಟಿದೆ ಅಂತ ಹೇಳಿದ್ದಾರೆ. ಅಲ್ಲಿಗೆ ಕೋಣ ಕುಣಿಬೆಳಕೆರೆ ಗ್ರಾಮಸ್ಥರಿಗೆ ಸೇರಿದ್ದು ಎಂದು ಸಾಬೀತಾಗಿದೆ. ಇದನ್ನು ಒಪ್ಪದ ಕುಳಗಟ್ಟೆ ಗ್ರಾಮಸ್ಥರು ಕೋಣ ನಮ್ಮದೇ ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಅಸಮಾಧಾನಗೊಂಡ ಕುಣಿಬೆಳಕೆರೆ ಗ್ರಾಮಸ್ಥರು ಮಲೆಬೆನ್ನೂರು ಠಾಣೆಯಲ್ಲಿ ದೂರು ನೀಡಿದ್ದು, ಕಳ್ಳತನ ಆರೋಪದಡಿ 7 ಜನರ ಮೇಲೆ ಎಫ್​ಐಆರ್ ದಾಖಲಾಗಿದೆ.

ಇನ್ನು ಈ ಪ್ರಕರಣ ಇತ್ಯರ್ಥವಾಗದ ಹಿನ್ನೆಲೆ ಕುಣಿಬೆಳಕೆರೆ ಗ್ರಾಮಸ್ಥರು ಆ ಕೋಣದಿಂದ ಜನಿಸಿದ ಮರಿಗಳು ನಮ್ಮ ಗ್ರಾಮದಲ್ಲಿ ಬಹಳಷ್ಟಿವೆ. ಹೀಗಾಗಿ ಡಿಎನ್​ಎ ಪರೀಕ್ಷೆ ಮಾಡಿಸಿ ಎಂದು ಆಗ್ರಹಿಸಿದ್ದಾರೆ. ಸದ್ಯ ಪೊಲೀಸರು ಕೋಣವನ್ನ ವಶಕ್ಕೆ ಪಡೆದು ಶಿವಮೊಗ್ಗದ ಮಹಾವೀರ ಗೋಶಾಲೆಗೆ ಬಿಟ್ಟಿದ್ದಾರೆ.

ಕರಿಯಮ್ಮ ದೇವಿ ದೇವಸ್ಥಾನ (ETV Bharat)

ಕುಣಿಬೆಳೆಕೆರೆ ಗ್ರಾಮದ ಗ್ರಾಮಸ್ಥ ವಿನಾಯಕ ಪ್ರತಿಕ್ರಿಯಿಸಿ, "ಕುಣಿಬೆಳೆಕೆರೆ ಗ್ರಾಮ ಮತ್ತು ಕುಳಗಟ್ಟೆ ಗ್ರಾಮದ ಗ್ರಾಮಸ್ಥರು ನಡುವೆ ಕೋಣಕ್ಕಾಗಿ ಹೋರಾಟ ಆರಂಭವಾಗಿದೆ. ಕೋಣ ಕಳೆದು ಹೋಗಿದೆ ಎಂದು ಮಲೇಬೆನ್ನೂರು ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದೇವೆ. ಆಗ ಹೊನ್ನಾಳಿಯ ಕುಳಗಟ್ಟೆ ಗ್ರಾಮದಲ್ಲಿ ಕೋಣ ಇರುವುದು ಗೊತ್ತಾಗಿದೆ. ಕುಳಗಟ್ಟೆ ಗ್ರಾಮಸ್ಥರು ಕೋಣ ನಮ್ಮದೇ ಎಂದು ವಾದಿಸುತ್ತಿದ್ದಾರೆ. ಇದೀಗ ಈ ಪ್ರಕರಣ ಎಸ್​ಪಿ ಕಚೇರಿ ಮೆಟ್ಟಿಲೇರಿದೆ. ಡಿಎನ್​ಎ ಟೆಸ್ಟ್ ಮಾಡಿಸಲು ಕುಣಿಬೆಳೆಕೆರೆ ಗ್ರಾಮಸ್ಥರು ಪಟ್ಟು ಹಿಡಿದಿದ್ದಾರೆ" ಎಂದರು.

ಮತ್ತೊಬ್ಬ ಗ್ರಾಮಸ್ಥ ತಿಪ್ಪೇಶ್ ಮಾತನಾಡಿ, " ನಾವು ಕೋಣಕ್ಕಾಗಿ ಮಲೇಬೆನ್ನೂರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲು ಮಾಡಿದ್ದೇವೆ. ಅದು ಕರಿಯಮ್ಮ ದೇವಿಗೆ ಬಿಟ್ಟಿರುವ ಕೋಣ. ಹಬ್ಬಕ್ಕೆ ಇನ್ನೆರಡು ವರ್ಷ ಬಾಕಿ ಇದೆ. ಅಷ್ಟರಲ್ಲಿ ಕೋಣ ಗ್ರಾಮಕ್ಕೆ ಬರಬೇಕು" ಎಂದು ಹೇಳಿದರು.

ಇದನ್ನೂ ಓದಿ:ಕೋಮು ಸಾಮರಸ್ಯ ಸಾರುವ ಶಿಶುನಾಳ: ಇಲ್ಲಿ ಹಿಂದೂ - ಮುಸ್ಲಿಮರಿಂದ ನಡೆಯುತ್ತೆ ಷರೀಫ್​ - ಗೋವಿಂದ ಭಟ್ಟರ ಮೂರ್ತಿಗಳಿಗೆ ಪೂಜೆ

ABOUT THE AUTHOR

...view details