ಹಾವೇರಿ:ಜಿಲ್ಲೆಯಲ್ಲಿನ ರೈತನೊಬ್ಬ ಬರಗಾಲದಲ್ಲೂ ಬಂಗಾರದಂತಹ ಮಾವು ಬೆಳೆದು, ಇತರರಿಗೆ ಮಾದರಿಯಾಗಿದ್ದಾರೆ. ಹಾವೇರಿ ತಾಲೂಕು ಆಲದಕಟ್ಟಿ ಗ್ರಾಮದ ಬಸವಂತಪ್ಪ ಅಗಡಿ ಎಂಬ ರೈತ ತಮ್ಮ ಒಂದು ಎಕರೆ ಜಮೀನಿನಲ್ಲಿ ಸುಮಾರು 30 ಮಾವಿನ ಮರಗಳನ್ನು ಬೆಳೆಸಿದ್ದಾರೆ. ಸುಮಾರು 20 ವರ್ಷಗಳ ಹಿಂದೆ ಹಚ್ಚಿದ ಈ ಮರಗಳು ಐದು ವರ್ಷಗಳಿಂದ ಫಸಲು ನೀಡಲಾರಂಭಿಸಿವೆ. ಕಳೆದ ನಾಲ್ಕು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಇವರ ಆದಾಯ ಅಧಿಕವಾಗುತ್ತಾ ಸಾಗುತ್ತಿದೆ.
ಉತ್ತಮ ಇಳುವರಿ ಉತ್ತಮ ಗಾತ್ರ ಹಾಗೂ ಉತ್ತಮ ರುಚಿಗೆ ಇವರ ತೋಟದ ಮಾವು ಪ್ರಸಿದ್ಧಿಯನ್ನು ಪಡೆದಿದೆ. ಇದಕ್ಕೆ ಕಾರಣ ಅವರು ಅನುಸರಿಸುವ ಸಾವಯವ ಪದ್ದತಿ. ಬಸವಂತಪ್ಪ ಕಳೆದ ಹಲವು ವರ್ಷಗಳಿಂದ ಮಾವಿಗೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಪ್ರತಿವರ್ಷ ಎರಡು ಬಾರಿ ತಿಪ್ಪೆಗೊಬ್ಬರ ಕೋಳಿಗೊಬ್ಬರ ಮತ್ತು ಜೀವಾಮೃತ ಇರುವ ಸ್ಲರಿಯನ್ನು ಇವರು ಮಾವಿನಗಿಡಗಳಿಗೆ ನೀಡುತ್ತಾರೆ.
ಜೊತೆಗೆ ಮಾವಿನ ಮರಕ್ಕೆ ಜೈವಿಕ ಔಷಧಿಗಳ ಸಿಂಪಡಣೆ ಮಾಡುವ ಮೂಲಕ ಮರಗಳನ್ನು ಉತ್ತಮವಾಗಿ ನೋಡಿಕೊಂಡಿದ್ದಾರೆ. ಪರಿಣಾಮ ಇವರು ಮಾವಿನತೋಟದ ಮಾವಿನ ಮರಗಳು ಟೊಂಗೆಗಳು ಮುರಿದು ಬೀಳುತ್ತೆವೇನೋ ಎಂಬಂತೆ ಬಾಸವಾಗುತ್ತವೆ. ಒಂದೊಂದು ಸಲ ಅಧಿಕ ಇಳುವರಿಯಿಂದ ಮಾವಿನ ಟೊಂಗೆಗಳು ಮುರಿದ ಉದಾಹರಣಿಗಳೂ ಇವೆ. ಇದಕ್ಕೆಲ್ಲ ನಮ್ಮ ಸಾವಯುವ ಕೃಷಿ ಪದ್ದತಿ ಕಾರಣ ಎನ್ನುತ್ತಾರೆ ಬಸವಂತಪ್ಪ.
ನಿರಂತರ ಮಾವಿನ ಪೋಷಣೆ:ಬಸವಂತಪ್ಪ ಮಾವು ಫಸಲು ಕೊಡಲಿ ಅಥವಾ ಕೊಡದೇ ಇರಲಿ ಅವುಗಳ ಪೋಷಣೆಯನ್ನು ಮಾತ್ರ ಮರೆಯುವುದಿಲ್ಲ. ಮಳೆಗಾಲ ಹೊರತುಪಡಿಸಿ ಬೇಸಿಗೆ ಕಾಲದಲ್ಲಿ ಪ್ರತಿ 15 ದಿನಕ್ಕೊಮ್ಮೆ ಬಸವಂತಪ್ಪ ಮಾವಿನಮರಗಳಿಗೆ ನೀರುಣಿಸುತ್ತಾರೆ. ಮಾವು ಚಿಗುರಿದಾಗ, ಮಾವು ನೆನೆಬಿಟ್ಟಾಗ, ಮಾವು ಮಿಡಿಗಾಯಿಗೆ ಬಂದಾಗ ಮತ್ತು ಮಾವು ಉತ್ತಮ ಗಾತ್ರ ಹೊಂದುವಾಗ ಹೆಚ್ಚಿನ ಒತ್ತು ನೀಡುತ್ತಾರೆ.