ಹುಬ್ಬಳ್ಳಿ:ಕಳೆದ ಎಂಟು ವರ್ಷಗಳ ಹಿಂದೆ ಮಹದಾಯಿಗಾಗಿ ಹುಬ್ಬಳ್ಳಿ ರೈಲ್ವೆ ನಿಲ್ದಾಣದಲ್ಲಿ ರೈಲ್ ರೋಕೋ ಚಳವಳಿಯಲ್ಲಿ ಭಾಗಿಯಾಗಿದ್ದ ಮಹದಾಯಿ ಹೋರಾಟಗಾರ ಕುತುಬುದೀನ್ ಖಾಜಿ ಎಂಬವರನ್ನು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಪ್ರಕರಣದ ವಿವರ: 2016ರ ಮಾರ್ಚ್ 15ರಂದು ಮಹದಾಯಿ ಹೋರಾಟಗಾರರು ರೈಲ್ ರೋಕೋ ಚಳವಳಿ ನಡೆಸಿದ್ದರು. ಇದರಿಂದಾಗಿ ಅಂದು 60 ಜನ ಹೋರಾಟಗಾರರ ಮೇಲೆ ಕೇಸ್ ದಾಖಲಾಗಿತ್ತು. ಆ ವೇಳೆಯಲ್ಲಿನ ಕೇಸ್ಗೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆಯ ಲೋಕಾಪುರದ ಕುತುಬುದೀನ್ ಖಾಜಿ ಅವರನ್ನು ರೈಲ್ವೆ ಪೊಲೀಸರು ಲೋಕಾಪುರದಲ್ಲಿ ಬಂಧಿಸಿ, ಹುಬ್ಬಳ್ಳಿಗೆ ಕರೆತಂದು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದಾರೆ.
ಲೋಕಸಭೆ ಚುನಾವಣೆ ಸಮಯದಲ್ಲಿಯೇ ಕಳಸಾ ಬಂಡೂರಿ ಹೋರಾಟಗಾರರ ಮೇಲಿನ ಕೇಸ್ ಅನ್ನು ಕೇಂದ್ರ ಸರ್ಕಾರ ರೀ ಓಪನ್ ಮಾಡಿದೆ. ರೈತರ ಮೇಲೆ ದೌರ್ಜನ್ಯ ಮಾಡುವುದು ಸರಿಯಲ್ಲ. ಕೂಡಲೇ ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ಬಿಡುಗಡೆಗೊಳಿಸಬೇಕು. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ರೈತರ ಮೇಲೆ ಹಾಕಿರುವ ಕೇಸ್‌ಗಳನ್ನು ವಜಾಗೊಳಿಸಬೇಕು. ಇಲ್ಲವಾದರೆ ಮಹದಾಯಿ ಹೋರಾಟಗಾರರು ಮತ್ತೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈಗಾಗಲೇ ರಾಜ್ಯ ಸರ್ಕಾರ ಮಹದಾಯಿ ಹೋರಾಟಗಾರರ ಮೇಲಿನ ಕೇಸ್‌ಗಳನ್ನು ಖುಲಾಸೆಗೊಳಿಸಿದೆ. ಆದರೆ ಕೇಂದ್ರ ಸರ್ಕಾರ ಕೂಡ ಅನ್ನದಾತರ ಮೇಲಿನ ಪ್ರಕರಣಗಳನ್ನು ತಕ್ಷಣ ಹಿಂಪಡೆದು, ಬಂಧಿತ ರೈತನನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಇಂದು ಚೆನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ಲೋಕಸಭಾ ಚುನಾವಣೆ ಬಹಿಷ್ಕರಿಸಲು ಮಹದಾಯಿ ಹೋರಾಟಗಾರರ ತೀರ್ಮಾನ