ಹಾವೇರಿ:ಮನುಷ್ಯಪ್ರಾಣಿ ಸಂಘರ್ಷದ ಮಧ್ಯೆ ಕಾಡು ಪ್ರಾಣಿಯೊಂದು ಮಾನವರ ಜೊತೆ ಮನೆಯ ಸದಸ್ಯನಂತೆ ವಾಸಿಸುತ್ತಿರುವ ಸುಂದರ ದೃಶ್ಯ ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲೂಕು ಕಾಕೋಳದಲ್ಲಿ ಬೆಳಕಿಗೆ ಬಂದಿದೆ.
ಕಾಕೋಳ ಗ್ರಾಮದ ಪ್ರಭುಗೌಡ ಕಲ್ಲನಗೌಡ್ರ ಮನೆಯಲ್ಲಿ ಕಾಡು ಮಂಗವೊಂದು ವಾಸಿಸುತ್ತಿದೆ. ಕಳೆದ ಮೂರು ವರ್ಷಗಳಿಂದ ಪ್ರಭುಗೌಡರ ಮನೆಯಲ್ಲಿ ವಾಸಿಸುತ್ತಿರುವ ಮಂಗ ಮನೆಯ ಸದಸ್ಯನಂತಾಗಿದೆ. ಮೂರು ವರ್ಷಗಳ ಹಿಂದೆ ಕಾಡುಮಂಗಗಳು ಹಿಂಡು ಬಂದಿತ್ತು. ಅದರಲ್ಲಿ ಹೆಣ್ಣಮಂಗವೊಂದು ಮರಿಗೆ ಜನ್ಮನೀಡಿ ಅವಧಿ ತುಂಬಿರದ ಕಾರಣ ತಾಯಿ ಮಂಗ ಮರಿ ಬಿಟ್ಟು ಹೋಗಿತ್ತು. ಆವಾಗ ಸಮೀಪದಲ್ಲಿದ್ದ ನಾನು ಮತ್ತು ನನ್ನ ಮಗ ಈ ಮರಿ ತಂದು ಪೋಷಣೆ ಮಾಡಿದೆವು. ಎರಡು ಮೂರು ದಿನಗಳ ಕಾಲ ಕಣ್ಣುಬಿಡದ ಮರಿ ನಂತರ ಆರೋಗ್ಯ ಪೂರ್ಣವಾಯಿತು. ಅಂದಿನಿಂದ ನಮ್ಮನ್ನು ಹಚ್ಚಿಕೊಂಡ ಮಂಗ ಮನೆ ಬಿಟ್ಟು ಹೋಗಲಿಲ್ಲ. ಈಗ ಈ ಮಂಗ ನಮ್ಮ ಮನೆಯ ಸದಸ್ಯನಂತಾಗಿದ್ದು, ಇದಕ್ಕೆ ಹನುಮಂತ ಎಂದು ಹೆಸರು ಇಟ್ಟಿದ್ದೇವೆ ಎನ್ನುತ್ತಾರೆ ಪ್ರಭುಗೌಡ.
ಆರಂಭದಲ್ಲಿ ಹಣ್ಣು ಸೇವಿಸುತ್ತಿದ್ದ ಮಂಗ:ಇನ್ನು ಆರಂಭದಲ್ಲಿ ಸೇಬುಹಣ್ಣು ಹಾಲು ಸೇವಿಸುತ್ತಿದ್ದ ಹನುಮಂತ ಈಗ ಬಾಳೆಹಣ್ಣು ಸೇರಿದಂತೆ ವಿವಿಧ ಹಣ್ಣುಗಳನ್ನು ಸೇವಿಸುತ್ತಿದೆ. ಮಂಗ ನೋಡಿದ ಹಲವರು ಇವರಿಗೆ ಅರಣ್ಯ ಇಲಾಖೆಗೆ ಅಥವಾ ಮಂಗಗಳ ಗುಂಪಿಗೆ ಬಿಡುವಂತೆ ಸೂಚಿಸಿದ್ದಾರೆ. ಆದರೆ ಹನುಮಂತ ಮಾತ್ರ ಮಂಗಗಳ ಹಿಂಡು ಸೇರದೇ ಮನೆಗೆ ಮರಳುತ್ತಿದೆ. ಕಾಕೋಳದ ತಮ್ಮ ಮನೆಯ ಓಣಿಯಲ್ಲಿ ಚಿಕ್ಕಮಕ್ಕಳು ಸೇರಿದಂತೆ ಹಲವರು ಇದರ ಸ್ನೇಹಿತರಾಗಿದ್ದಾರೆ. ಅವರನ್ನು ನೋಡಿದ ತಕ್ಷಣ ಹೋಗಿ ಆಟವಾಡುತ್ತದೆ ಎಂದು ಮಾಲೀಕರು ಸಂತಸ ವ್ಯಕ್ತಪಡಿಸುತ್ತಾರೆ.