ತುಮಕೂರು: ಮತದಾನದ ಬಗ್ಗೆ ಜಾಗೃತಿ ಮೂಡಿಸಲು ವೈದ್ಯರೊಬ್ಬರು ಕುದುರೆ ಏರಿ ಮತಗಟ್ಟೆ ಬಂದು ಮತಹಕ್ಕು ಚಲಾಯಿಸಿದರು. ತುಮಕೂರು ಜಿಲ್ಲೆ ತಿಪಟೂರು ಪಟ್ಟಣದ ಮತಗಟ್ಟೆ ಸಂಖ್ಯೆ 82 ರಲ್ಲಿ ಕುದುರೆ ಏರಿ ಬಂದು ವೈದ್ಯ ಡಾ.ಶ್ರೀಧರ್ ಮತದಾನ ಮಾಡಿದರು. ಈ ಮೂಲಕ ಗಮನ ಸೆಳೆದರು.
ಸತ್ಯಕುಮಾರ್ ಫೌಡೇಂಶನ್ ಮೂಲಕ ಸಮಾಜ ಸೇವೆ ಮಾಡುತ್ತಿರುವ ವೈದ್ಯ ಡಾ.ಶ್ರೀಧರ್ ಕುದುರೆ ಮೇಲೆ ಮತಗಟ್ಟೆಗೆ ಬಂದು ಜನರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವುದರ ಜೊತೆಗೆ ಮತದಾರರಿಗೆ ಉಚಿತವಾಗಿ ಸಮೋಸಾ ಮತ್ತು ಟೀ ವಿತರಿಸಿದರು. ಈ ಮೂಲಕ ವಿನೂತನ ರೀತಿಯಲ್ಲಿ ಮತದಾನ ಜಾಗೃತಿ ಮೂಡಿಸಿದರು. 'ಮತದಾನ ಪ್ರತಿಯೊಬ್ಬರ ಕರ್ತವ್ಯ, ಎಲ್ಲರೂ ಮತಹಕ್ಕು ಚಲಾಯಿಸಬೇಕು' ಎಂದು ಕರೆ ನೀಡಿದರು.
ನವ ದಂಪತಿ ಮತದಾನ:ಚಿತ್ರದುರ್ಗ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಸೇರಿದ ಪಾವಗಡ ತಾಲೂಕಿನ ಪೆಮ್ಮನಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಲಾಗಿದ್ದ ಮತಗಟ್ಟೆಗೆ ಬಂದು ನವ ದಂಪತಿ ಮತ ಚಲಾಯಿಸಿದರು. ಹಸೆಮಣೆ ಏರಿದ ನಂತರ ಮದುವೆ ಉಡುಪಿನಲ್ಲೇ ಮತದಾನ ಮಾಡಲು ಮತಗಟ್ಟೆಗೆ ನವಜೋಡಿ ಆಗಮಿಸಿದ್ದು ವಿಶೇಷ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಟಿ.ಎನ್ ಬೆಟ್ಟದ ನವ ದಂಪತಿಗಳಾದ ಲಕ್ಷ್ಮೀಪತಿ ಪಿ.ಹೆಚ್ ಮತ್ತು ನವ್ಯಶ್ರೀ ಮದುವೆ ದಿನವೇ ಮತದಾನ ಮಾಡಿ ಮಾದರಿಯಾದರು. ಸರತಿ ಸಾಲಿನಲ್ಲಿ ನಿಂತು ಮತ ಹಕ್ಕು ಚಲಾವಣೆ ಮಾಡಿದ ನವ ದಂಪತಿಗಳ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ 'ಯಾರೊಬ್ಬರು ಮತದಾನದಿಂದ ದೂರ ಉಳಿಯದಿರಿ. ಮತದಾನ ಎಲ್ಲಎ ಹಕ್ಕು' ಎಂದು ಸಂದೇಶ ಸಾರಿದರು.