ಕರ್ನಾಟಕ

karnataka

ETV Bharat / state

ಗಡಿಯಲ್ಲಿ ಕನ್ನಡ ಗಟ್ಟಿಗೊಳಿಸಿದ ಬೆಳಗಾವಿ 'ನಾಡಹಬ್ಬ ಉತ್ಸವ'ಕ್ಕೆ 97ರ ಸಂಭ್ರಮ - Belagavi Nadahabba Utsav - BELAGAVI NADAHABBA UTSAV

ಗಡಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ಕಳೆದ 97 ವರ್ಷಗಳಿಂದ ಹತ್ತು ಹಲವು ರೀತಿಯ ಸೇವೆ ಸಲ್ಲಿಸುತ್ತಾ ಬಂದಿರುವ ಬೆಳಗಾವಿ 'ನಾಡಹಬ್ಬ ಉತ್ಸವ'ಕ್ಕೀಗ 97ರ ಸಂಭ್ರಮ. ಈ ಕುರಿತು ವಿಶೇಷ ವರದಿ.

Celebration of 97 for Belagavi Nadahabba Utsav, which strengthened Kannada at the border
ಬೆಳಗಾವಿ ನಾಡಹಬ್ಬ ಉತ್ಸವ (ETV Bharat)

By ETV Bharat Karnataka Team

Published : Oct 7, 2024, 3:56 PM IST

ಬೆಳಗಾವಿ: ಒಂದೆಡೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಜನರನ್ನು ಒಗ್ಗೂಡಿಸಲು ಬೆಳಗಾವಿಯಲ್ಲಿ ಬಾಲಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವ ಆರಂಭಿಸಿದ್ದರು. ಮತ್ತೊಂದೆಡೆ, ಇದೇ ಬೆಳಗಾವಿಯಲ್ಲಿ ಕನ್ನಡವನ್ನು ಗಟ್ಟಿಗೊಳಿಸಲು 'ನಾಡಹಬ್ಬ ಉತ್ಸವ'ವೂ ಶುರುವಾಗಿತ್ತು. ಈ ಉತ್ಸವಕ್ಕೀಗ 97ರ ವರುಷದ ಹರುಷ.

ಹಲವು ವಿಶೇಷತೆಗಳ ಕಣಜ ಗಡಿನಾಡ ಜಿಲ್ಲೆ ಬೆಳಗಾವಿಯಲ್ಲಿ 1927ರಲ್ಲಿ ರುದ್ರಾಪುರದ ಶಿವಲಿಂಗ ದೇಸಾಯಿ ಮತ್ತು ಅನಂತರಾವ್‌ ಚಿಕ್ಕೋಡಿ ನಾಡಹಬ್ಬ ಉತ್ಸವ ಆರಂಭಿಸಿದರು. ಇದೀಗ 9 ದಶಕಗಳ ವರ್ಷಗಳ ನಂತರವೂ ಉತ್ಸವ ಸಡಗರದಿಂದ ನಡೆಯುತ್ತಿದೆ. ಪ್ರಸ್ತುತ ಉತ್ಸವ ಸಮಿತಿ ಅಧ್ಯಕ್ಷರಾದ ಡಾ. ಎಚ್.ಬಿ.ರಾಜಶೇಖರ, ಕಾರ್ಯದರ್ಶಿಯಾಗಿ ಸಿ.ಕೆ.ಜೋರಾಪುರ ಅವರು ಕನ್ನಡ ಸೇವೆಯನ್ನು ಮುಂದುವರಿಸಿಕೊಂಡು ಹೋಗುತ್ತಿದ್ದಾರೆ.

ಬೆಳಗಾವಿ ನಾಡಹಬ್ಬ ಉತ್ಸವದ ಕುರಿತು ಪ್ರತಿಕ್ರಿಯೆಗಳು (ETV Bharat)

ರಾಜ್ಯದ ವಿವಿಧೆಡೆ ನಡೆಯುವ ನಾಡಹಬ್ಬ ಉತ್ಸವವು ಧಾರ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳಿಗೆ ಸೀಮಿತವಾಗಿದೆ. ಆದರೆ, ಬೆಳಗಾವಿಯ ನಾಡಹಬ್ಬ ಗಡಿನಾಡ ಕನ್ನಡಿಗರಲ್ಲಿ ಕನ್ನಡದ ಕಿಚ್ಚು ಹೊತ್ತಿಸುವಲ್ಲಿ ಯಶಸ್ವಿಯಾಗಿದೆ. ಪ್ರತೀ ವರ್ಷ ಇಲ್ಲಿ ಐದು ದಿನ ನಾಡಹಬ್ಬದ ಉತ್ಸವ ನಡೆಯುತ್ತದೆ. ಸಾಂಪ್ರದಾಯಿಕವಾಗಿ ಉದ್ಘಾಟನೆ, ಸಮಾರೋಪ ಕಾರ್ಯಕ್ರಮಗಳು ನೆರವೇರುತ್ತವೆ. ವಿವಿಧ ಸಾಧಕರನ್ನು ಸನ್ಮಾನಿಸಲಾಗುತ್ತದೆ. ಸಾಂಸ್ಕೃತಿಕ ಕಾರ್ಯಕ್ರಮವೂ ಜರುಗುತ್ತವೆ. ಇದರೊಂದಿಗೆ ಗಡಿಗೆ ಸಂಬಂಧಿಸಿದ ಗೋಷ್ಠಿಗಳನ್ನು ಆಯೋಜಿಸಿ, ಕನ್ನಡ ಡಿಂಡಿಮ ಬಾರಿಸುತ್ತಾ ಪ್ರತಿ ಕನ್ನಡಿಗನನ್ನು ಜಾಗೃತಿಗೊಳಿಸುತ್ತಿದ್ದಾರೆ. ಈ ನಾಡಹಬ್ಬ ಉತ್ಸವ ಇನ್ನು ಮೂರು ವರ್ಷ ಕಳೆದರೆ ಶತಮಾನದ ಸಂಭ್ರಮಕ್ಕೆ ಸಾಕ್ಷಿಯಾಗುತ್ತದೆ.

ಬೆಳಗಾವಿ ನಾಡಹಬ್ಬ ಉತ್ಸವ (ಸಂಗ್ರಹ ಚಿತ್ರ) (ETV Bharat)

ಈ ಹಿಂದೆ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯವಿದ್ದಾಗಲೂ ನಾಡಹಬ್ಬ ಉತ್ಸವ ಆಯೋಜಿಸಿದ್ದ ವೇದಿಕೆಗಳನ್ನೇ ಎಂಇಎಸ್‌ ಕಾರ್ಯಕರ್ತರು ಸುಟ್ಟು, ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು. ಸಂಘಟಕರಿಗೆ ನಾನಾ ಬೆದರಿಕೆಗಳನ್ನು ಹಾಕಿದ್ದಾರೆ. ಆದರೆ, ಯಾವುದಕ್ಕೂ ಬಗ್ಗದ ಆಯೋಜಕರು ನಾಡಹಬ್ಬದ ಪರಂಪರೆಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ಬೆಳಗಾವಿ ನಾಡಹಬ್ಬ ಉತ್ಸವ (ಸಂಗ್ರಹ ಚಿತ್ರ) (ETV Bharat)

ಗದಗ-ಡಂಬಳ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧರಾಮ ಸ್ವಾಮೀಜಿ 'ಈಟಿವಿ ಭಾರತ'ದ ಜೊತೆಗೆ ಮಾತನಾಡಿ, "ಸರ್ಕಾರದ ಆರ್ಥಿಕ ಸಹಾಯ ಇಲ್ಲದೇ ಗಡಿ ನಾಡಿನಲ್ಲಿ ನಾಡಹಬ್ಬ ಉತ್ಸವವನ್ನು 97 ವರ್ಷಗಳಿಂದ ನಮ್ಮ ಹಿರಿಯರು ತಾವೇ ಹಣ ಸಂಗ್ರಹಿಸಿ ನಡೆಸಿಕೊಂಡು ಬಂದಿದ್ದಾರೆ. ಮೈಸೂರು ದಸರಾಗೆ ನೂರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರ, ಬೆಳಗಾವಿ ನಾಡಹಬ್ಬ ಉತ್ಸವಕ್ಕೆ ನಯಾಪೈಸೆ ಕೊಡುವುದಿಲ್ಲ. ಹಾಗಾಗಿ, ಶತಮಾನೋತ್ಸವ ಕಾರ್ಯಕ್ರಮಕ್ಕಾದರೂ ಸಹಾಯಧನ ನೀಡಲಿ" ಎಂದು ಒತ್ತಾಯಿಸಿದರು.

ನಾಡಹಬ್ಬ ಉತ್ಸವದಲ್ಲಿ ಮಾಜಿ ಸಿಎಂ ಬಿ.ಎಸ್.​ವೈ ಮಾತನಾಡುತ್ತಿರುವುದು. (ಸಂಗ್ರಹ ಚಿತ್ರ) (ETV Bharat)

ಉತ್ಸವ ಸಮಿತಿ ಅಧ್ಯಕ್ಷ ಡಾ.ಹೆಚ್​​.ಬಿ.ರಾಜಶೇಖರ ಮಾತನಾಡಿ, "1927ರ ಕಾಲಘಟ್ಟದಲ್ಲಿ ಬೆಳಗಾವಿಯಲ್ಲಿ ಮರಾಠಿ ಪ್ರಾಬಲ್ಯ ಹೆಚ್ಚಿತ್ತು. ಹಾಗಾಗಿ, ಗಡಿಯಲ್ಲಿ ಕನ್ನಡ ಭಾಷೆ ಗಟ್ಟಿಗೊಳಿಸಲು ಸಾಹಿತಿಗಳು, ಹೋರಾಟಗಾರರು, ಬರಹಗಾರರು ನಾಡಹಬ್ಬ ಆಚರಿಸಿಕೊಂಡು ಬಂದಿದ್ದಾರೆ. ನಾಗನೂರು ರುದ್ರಾಕ್ಷಿ ಮಠ ಮತ್ತಿ ಕೆಎಲ್ಇ ಸೇರಿ ಮತ್ತಿತರ ಸಂಘ-ಸಂಸ್ಥೆಗಳು ಉತ್ಸವಕ್ಕೆ ಬೆನ್ನೆಲುಬಾಗಿ ನಿಂತಿವೆ. ಆ ಪರಂಪರೆಯನ್ನು ನಾವು ಮುಂದುವರಿಸಿಕೊಂಡು ಹೋಗುತ್ತಿದ್ದೇವೆ. ಶತಮಾನೋತ್ಸವ ಕಾರ್ಯಕ್ರಮವನ್ನು ದೊಡ್ಡ ಮಟ್ಟದಲ್ಲಿ ಆಯೋಜಿಸಲು ಯೋಜನೆ ಹಾಕಿಕೊಂಡಿದ್ದೇವೆ" ಎಂದರು.

ಇದನ್ನೂ ಓದಿ:ಮರಾಠಿ, ಪಾಲಿ, ಪ್ರಾಕೃತ, ಅಸ್ಸಾಮಿ, ಬಂಗಾಳಿ ಭಾಷೆಗಳಿಗೂ ಶಾಸ್ತ್ರೀಯ ಸ್ಥಾನಮಾನ - classical languages

ABOUT THE AUTHOR

...view details