ಬೆಂಗಳೂರು:ಸಿಲಿಕಾನ್ ಸಿಟಿಯಲ್ಲಿ ಬೀದಿ ನಾಯಿಗಳ ಹಾವಳಿಗೆ ವೃದ್ಧೆಯೊಬ್ಬರು ಬಲಿಯಾಗಿರುವ ದಾರುಣ ಘಟನೆ ನಡೆದಿದೆ. ಏಕಾಏಕಿ ಬೀದಿ ನಾಯಿಗಳ ಗುಂಪು ವೃದ್ಧೆ ಮೇಲೆ ಎರಗಿದ್ದರಿಂದ ತೀವ್ರ ತರಹದ ಗಾಯಗೊಂಡು ಸಾವನ್ನಪ್ಪಿದ್ದಾರೆ.
ಗಂಗಮ್ಮನಗುಡಿ ಪೊಲೀಸ್ ಠಾಣಾ ವ್ಯಾಪ್ತಿಯ ಜಾಲಹಳ್ಳಿ ವಾಯುಸೇನೆ ನೆಲೆಯ 7ನೇ ವಸತಿ ಗೃಹಗಳ ಕ್ಯಾಂಪ್ನಲ್ಲಿ ಇಂದು ಮುಂಜಾನೆ ಈ ಘಟನೆ ನಡೆದಿದೆ. ರಾಜ್ ದುಲಾರಿ ಸಿನ್ಹಾ (76) ಮೃತ ವೃದ್ಧೆ.
ನಿವೃತ್ತಿ ಶಿಕ್ಷಕಿಯಾಗಿದ್ದ ಸಿನ್ಹಾ ಇಂದು ಬೆಳಗ್ಗೆ ವಾಯುನೆಲೆ ಆವರಣದಲ್ಲಿ ವಾಕಿಂಗ್ ಮಾಡುವಾಗ ಏಕಾಏಕಿ 10ರಿಂದ 12 ನಾಯಿಗಳ ಗುಂಪು ವೃದ್ಧೆ ಮೇಲೆ ದಾಳಿ ಮಾಡಿವೆ. ಇದರಿಂದ ಗಂಭೀರ ಗಾಯಗೊಂಡಿದ್ದ ವೃದ್ಧೆಯನ್ನು ಕೂಡಲೇ ಎಂ. ಎಸ್. ರಾಮಯ್ಯ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರ ಅಳಿಯ ಜಾಲಹಳ್ಳಿಯ ವಾಯುನೆಲೆಯಲ್ಲಿ ಕೆಲಸ ಮಾಡುತ್ತಿದ್ದು, ಇವರು ನೀಡಿದ ದೂರಿನ ಮೇರೆಗೆ ಗಂಗಮ್ಮನಗುಡಿ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದೆ. ಬೀದಿ ನಾಯಿಗಳ ಹಾವಳಿ ನಿಯಂತ್ರಿಸಬೇಕೆಂದು ಸ್ಥಳೀಯರು ಬಿಬಿಎಂಪಿಗೆ ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಶಿವಮೊಗ್ಗ: ನಾಯಿ ಕಚ್ಚಿ ಚಿಕಿತ್ಸೆ ಫಲಕಾರಿಯಾಗದೆ ಮಹಿಳೆ ಸಾವು - Dog Bite