ಬೆಂಗಳೂರು:ದೇಶಾದ್ಯಂತ ಜಾರಿಯಾಗಿರುವ ನೂತನ ಕ್ರಿಮಿನಲ್ ಅಪರಾಧ ಕಾನೂನಿನ ಅಡಿ ರಾಜ್ಯದಲ್ಲಿಂದು ಒಟ್ಟು 80 ಪ್ರಕರಣಗಳು (ರಾತ್ರಿ 10 ಗಂಟೆಯವರೆಗಿನ ಅಂಕಿ-ಅಂಶಗಳ ಪ್ರಕಾರ) ದಾಖಲಾಗಿವೆ. ಆ ಪೈಕಿ ಬೆಂಗಳೂರು ನಗರದಲ್ಲಿ ಗರಿಷ್ಠ (27) ಪ್ರಕರಣಗಳು ದಾಖಲಾಗಿವೆ. ಬೆಳಗಾವಿ, ಬೀದರ್, ಚಾಮರಾಜನಗರ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾವೇರಿ, ಕೊಪ್ಪಳ, ವಿಜಯಪುರ, ಮಂಡ್ಯ, ಮೈಸೂರು ನಗರ, ರಾಯಚೂರು, ರಾಮನಗರ, ತುಮಕೂರು, ಉಡುಪಿ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ತಲಾ ಒಂದೊಂದು ಪ್ರಕರಣಗಳು ದಾಖಲಾಗಿವೆ.
ಇಂದಿನಿಂದ ಅನುಷ್ಠಾನಕ್ಕೆ ಬಂದಿರುವ ನೂತನ ಕಾಯ್ದೆಗಳಾದ ಭಾರತೀಯ ನ್ಯಾಯ ಸಂಹಿತೆ-2023, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023, ಭಾರತೀಯ ಸಾಕ್ಷ್ಯ ಅಧಿನಿಯಮ-2023ರ ಕುರಿತು ರಾಜ್ಯ ಪೊಲೀಸ್ ಇಲಾಖೆಯ ಎಲ್ಲ 7 ವಲಯಗಳು, 6 ಕಮಿಷನರೇಟ್ ಘಟಕಗಳು ಹಾಗೂ 1,063 ಪೊಲೀಸ್ ಠಾಣೆಗಳು ಸೇರಿದಂತೆ ರಾಜ್ಯದ ಎಲ್ಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಅಗತ್ಯ ತರಬೇತಿ ನೀಡಲಾಗಿತ್ತು.